ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾನವೀಯತೆಯೇ ದೊಡ್ಡ ಶಕ್ತಿ. ಇಂದಿನ ಯುವಕರು ಮನುಷ್ಯಪ್ರೇಮ ಮೆರೆದಾಗ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಭಾರತ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಹೇಳಿದರು.ಇಲ್ಲಿನ ವಕೀಲರ ಭವನದಲ್ಲಿ ಸಿಟಿಜನ್ ಫೋರಂ, ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ‘ಕಳೆದ ಕಾಲ ನಡೆದ ದೂರ’ ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿ,
ನ್ಯಾಯಾಂಗ ಶಕ್ತಿಯೇ ಮನುಷ್ಯತ್ವ. ಮಾನವೀಯತೆ ಕಳೆದುಕೊಳ್ಳಬಾರದು. ನಮಗಾಗಿ ಬದುಕುವುದು ದೊಡ್ಡದಲ್ಲ. ಸಮಾಜದ ಏಳಿಗೆಗಾಗಿ ಕೆಲಸ ಮಾಡುವುದೇ ಶ್ರೇಷ್ಠ. ಇಂದಿನ ಯುವಕರು ಮನುಷ್ಯಪ್ರೇಮ ಮೆರೆದಾಗ ಸದೃಢ ದೇಶ ಕಟ್ಟಲು ಸಾಧ್ಯ ಎಂದರು.ದೇವರು ನಮಗೆ ಸೇವೆ ಮಾಡಲು ಹಲವು ಅವಕಾಶಗಳನ್ನು ಕೊಡುತ್ತಾನೆ. ಬಡವರು, ಶೋಷಿತರ ಪರ ಇದನ್ನು ಬಳಸಿಕೊಳ್ಳಬೇಕು. ವಕೀಲರಿಗೆ ಫೀಜು, ಪ್ರಾರ್ಥನೆ ಎರಡೂ ಸಿ
ಗುತ್ತೆ. ಆದರೆ, ಒಬ್ಬ ಕಕ್ಷಿದಾರ ನೀವು ನಿಮ್ಮ ಮಕ್ಕಳು ಕುಟುಂಬ ಸುಖವಾಗಿರಿ ಎಂದು ಪ್ರಾರ್ಥನೆ ಮಾಡಿದ್ದು ಹೆಚ್ಚು ಬೆಲೆಯುಳ್ಳದ್ದಾಗಿರುತ್ತದೆ ಎಂದು ಹೇಳಿದರು.ನಮ್ಮದು ಅತ್ಯಂತ ಕುಗ್ರಾಮ, ಬಡತನ ಬೇರೆ. ಇಂತಹ ಕುಗ್ರಾಮದ ಹಳ್ಳಿಯಿಂದ ದಿಲ್ಲಿಯ ಸರ್ವೋಚ್ಛ ನ್ಯಾಯಾಲಯದವರೆಗೂ ಹೋಗಿರುವುದು ಒಂದು ದೊಡ್ಡ ಸಾಧನೆಯೇ ಆಗಿದೆ. ಈ ಸಾಧನೆಯ ಹಾದಿಯಲ್ಲಿ ನೋವು, ನಲಿವು, ಕಷ್ಟ, ಸುಖ, ದುಃಖ ಎಲ್ಲವೂ ಇದೆ. ಈ ದಾರಿ ಅಷ್ಟು ಸುಲಭವಲ್ಲ, ಆದರೆ ಕಷ್ಟವೂ ಅಲ್ಲ, ಪರಿಶ್ರಮ, ಸಾಧನೆ, ಪ್ರಾಮಾಣಿ ಕತೆ, ವಿನಯ ಇವೆಲ್ಲವನ್ನೂ ಬೆಳೆಸಿಕೊಂಡಾಗ, ಆತ್ಮ ವಿಶ್ವಾಸವಿದ್ದಾಗ ಸಾಧಕರಾಗಬಹುದು. ಯುವಕರು ಈ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಇಂದಿನ ಯುವ ಜನಾಂಗ ಪುಸ್ತಕಗಳನ್ನು ಓದುವುದನ್ನು ಮರೆತುಬಿಟ್ಟಿದ್ದಾರೆ. ಚಿಕ್ಕ ವಿಷಯಕ್ಕೆ ಮೊಬೈಲ್ ಮೊರೆ ಹೋಗುತ್ತಾರೆ. ಆದರೆ, ಓದುವುದನ್ನು ಮರೆತುಬಿಡುತ್ತಾರೆ. ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಕೆಲವರು ಪುಸ್ತಕ ಕೊಳ್ಳುತ್ತಾರೆ ಓದುವುದಿಲ್ಲ. ಕೆಲವರು ಕೊಂಡುಕೊಳ್ಳುವುದಿಲ್ಲ ಆದರೆ, ಓದುತ್ತಾರೆ. ಇನ್ನೂ ಕೆಲವರು ಕೊಂಡು ಓದಿ ಅರ್ಥ ಮಾಡಿಕೊಂಡು ಉಳಿದವರಿಗೂ ಹಂಚುತ್ತಾರೆ. ನಮ್ಮ ಓದು ಅರಿವನ್ನು ವಿಸ್ತರಿಸುವ ಹಾಗಿರಬೇಕು ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಭಾರತದ ಪ್ರಜಾಪ್ರಭುತ್ವ ನಮ್ಮೆಲ್ಲರಿಗೂ ನೆಮ್ಮದಿ ನೀಡಿದೆ. ಈ ನೆಮ್ಮದಿಯನ್ನು ಒಳ್ಳೆಯದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನ್ಯಾಯಮೂರ್ತಿಗಳು ಅತ್ಯಂತ ಕುಗ್ರಾಮದಲ್ಲಿ ಬೆಳೆದು ಹಳ್ಳಿಯಿಂದ ದಿಲ್ಲಿಗೆ ಹೋಗಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವಿಶ್ರಾಂತಿ ನಂತರವೂ ಯುವಕರು ನಾಚುವಂತೆ ಕ್ರಿಯಾಶೀಲರಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ. ಅವರು ಒಬ್ಬ ಸಂತರು ಎಂದು ಹೇಳಿದರು.ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಂಚಾಲಕ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಕನ್ನಡದ ಕಣ್ಮಣಿ. ಕನ್ನಡದಲ್ಲಿಯೇ ಕೃತಿ ಬರೆದಿದ್ದಾರೆ. ಅವರು ಅತ್ಯಂತ ಹೃದಯವಂತ, ಮಾನವೀಯತೆಯ ಪ್ರತೀಕ ಮತ್ತು ಅತ್ಯಂತ ಸರಳ ವ್ಯಕ್ತಿ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಿವಮೂರ್ತಿ, ಹಿರಿಯ ನ್ಯಾಯವಾದಿ ಕೆ. ಬಸಪ್ಪಗೌಡ, ಫಾ. ರೋಷನ್ ಪಿಂಟೋ, ಆಯನೂರು ಮಂಜುನಾಥ್ ಮತ್ತಿತರರು ಇದ್ದರು. ಇಮ್ತಿಯಾಜ್ ಪ್ರಾರ್ಥಿಸಿದರು. ವೈದ್ಯ ಸ್ವಾಗತಿಸಿದರು. ಕೃತಿಯ ಕುರಿತು ಲೇಖಕನ ಮಾತು
ಆತ್ಮಾವಲೋಕನ ಮಾಡಿಕೊಳ್ಳಲು ನಾನು ನನ್ನ ಆತ್ಮಕತೆ ‘ಕಳೆದ ಕಾಲ ನಡೆದ ದೂರ’ ಕೃತಿ ಬರೆಯಬೇಕಾಯಿತು. ಆದರೆ, ಆತ್ಮಕತೆ ಬರೆಯುವುದು ತುಂಬಾ ಕಷ್ಟ. ಬದುಕು ಹೇಗಿತ್ತು. ವೃತ್ತಿಯಲ್ಲಿನ ಅನುಭವಗಳು ಬೇರೆಯವರಿಗೆ ಮಾದರಿಯಾಗಬಹುದು ಎಂಬ ಉದ್ದಿಶ್ಯದಿಂದ ಈ ಕೃತಿ ರಚಿಸಬೇಕಾಯಿತು ಎಂದು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಹೇಳಿದರು.