ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ರಿಂಗ್ ರಸ್ತೆಯಲ್ಲಿನ ಶಾರದಾಂಬೆ ದೇವಸ್ಥಾನ ಪಕ್ಕದಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಭಾನುವಾರ ವಿವಿಧ ಬಗೆಯ ಆಹಾರ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಕರಕುಶಲ ವಸ್ತುಗಳು, ಬೆಡ್‌ಶೀಟ್, ಬೆಡ್‌ಸ್ಪ್ರೆಡ್ ಸೇರಿ ನಾನಾ ವಸ್ತುಗಳ ಪ್ರದರ್ಶನ ಮಾರಾಟ ಮೇಳ ನಡೆಯಿತು.ಬಾಪೂಜಿ ಸಂಸ್ಥೆ ನಿರ್ದೇಶಕ ಡಾ.ಸಂಪಣ್ಣ ಮುತಾಲಿಕ್, ಹಿರಿಯ ವಕೀಲ ಜೆ.ಎಚ್. ವಸಂತಕುಮಾರ್ ಮೇಳಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಡಾ.ಶಶಿಕಾಂತ್ ಮಾತನಾಡಿ, ಸ್ಥಳೀಯ ಗೃಹೋದ್ಯಮಿಗಳು ಮತ್ತು ವ್ಯಾಪಾರಿಗಳ ಪ್ರೋತ್ಸಾಹಿಸಲು ಅವರ ಉತ್ಪನ್ನಗಳ ಎಲ್ಲರಿಗೂ ತಲುಪಿಸಲು ಈ ಮೇಳ ಹಮ್ಮಿಕೊಳ್ಳಲಾಗಿದೆ. ಯುವಜನತೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಬದಲು ತಮ್ಮ ಊರಲ್ಲೇ ಸ್ವಂತ, ಸಣ್ಣ ಉದ್ಯಮ ಆರಂಭಿಸಿ ಸ್ವಂತ ಕಾಲ ಮೇಲೆ ನಿಲ್ಲಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಸಂಕಲ್ಪಕ್ಕೆ ಸಹಕಾರ ನೀಡಬೇಕು ಎಂದರು.
ತಾಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ದಾವಣಗೆರೆಯ ಗೃಹೋದ್ಯಮಿಗಳ ಉತ್ತೇಜಿಸುವ ಉದ್ದೇಶದಿಂದ ಶ್ರೀಶಂಕರ ಸಮುದಾಯ ಭವನದಲ್ಲಿ ಸ್ಫೂರ್ತಿ 2024 ವಸ್ತು ಪ್ರದರ್ಶನ ಮತ್ತು ಆಹಾರ ಮೇಳ ಆಯೋಜಿಸಲಾಗಿತ್ತು. ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ವ್ಯಾಪಾರಿಗಳು, ಆಹಾರೋತ್ಪನ್ನ ಉತ್ಪಾದಕರು ಮೇಳದಲ್ಲಿ ಭಾಗವಹಿಸಿದ್ದರು.ಒಟ್ಟು 40 ಮಳಿಗೆಗಳಲ್ಲಿ ಗೃಹೋಪಯೋಗಿ, ಗೃಹಲಂಕಾರ ವಸ್ತುಗಳು, ಸೌಂದರ್ಯ ವರ್ಧಕ ಸಾಮಗ್ರಿ, ಕರಕುಶಲ ವಸ್ತುಗಳು, ಪೂಜಾ ಸಾಮಗ್ರಿ, ಗಡಿಯಾರ, ಆರ್ಟಿಫಿಷಲ್ ಜ್ಯುವೆಲ್ಲರಿ, ಹೋಮ್ ಥಿಯೇಟರ್ ಮೊದಲಾದ ಉತ್ಪನ್ನಗಳು ಗ್ರಾಹಕರ ಆಕರ್ಷಿಸಿದವು. ಇನ್ನೊಂದೆಡೆ ಸ್ಯಾಂಡ್ವಿಚ್, ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ, ಕೊಬ್ಬರಿ ಬರ್ಫಿ, ಹಲಸಿನ ಹಣ್ಣಿನ ವಡೆ, ಅತಿರಸ, ಪಾನಿಪುರಿ, ತುಪ್ಪದ ಮಂಡಿಗೆ, ಕಾಫಿ, ಟೀ, ಮಸಾಲೆ ಮಜ್ಜಿಗೆ, ನನ್ನಾರಿ ಬೇರಿನ ಜ್ಯೂಸ್ ಮೊದಲಾದ ತಿನಿಸು, ಪಾನೀಯಗಳು ಆಹಾರ ಪ್ರಿಯರ ಹೊಟ್ಟೆ ಹಸಿವು ತಣಿಸಿದವು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಗೋಪಾಲ್ ದಾಸ್, ನಿರ್ದೇಶಕರಾದ ಸತ್ಯನಾರಾಯಣ, ಡಿ.ಶೇಷಾಚಲ, ಭಾಸ್ಕರ ಭಟ್, ರಾಮಚಂದ್ರ ರಾವ್, ಉಮೇಶ್ ಕುಲಕರ್ಣಿ, ಉಮಾಕಾಂತ್ ದೀಕ್ಷಿತ್, ಶಂಕರ ಸಮುದಾಯ ಭವನದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ್ ಇತರರಿದ್ದರು.