ವ್ಯಸನಮುಕ್ತ ಯುವಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ-ಸಿದ್ಧರಾಮ ಸ್ವಾಮೀಜಿ

| Published : Apr 09 2025, 12:30 AM IST

ವ್ಯಸನಮುಕ್ತ ಯುವಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ-ಸಿದ್ಧರಾಮ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ದಿನಗಳಲ್ಲಿ ನಾನಾ ಬಗೆಯ ವ್ಯಸನಗಳು ಯುವ ಜನಾಂಗವನ್ನು ಆಕರ್ಷಿಸುತ್ತಿದ್ದು, ಇವುಗಳ ಅಪಾಯ ವ್ಯಸನಿಗಳ ಕುಟುಂಬಕ್ಕೆ ಮಾತ್ರವಲ್ಲದೇ ಸಮಾಜಕ್ಕೂ ತಟ್ಟುತ್ತದೆ. ಸದೃಢ ಸಮಾಜ ಕಟ್ಟಲು ಯುವಜನಾಂಗ ವ್ಯಸನಮುಕ್ತರಾಗುವುದು ಅವಶ್ಯಕವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಆಧುನಿಕ ದಿನಗಳಲ್ಲಿ ನಾನಾ ಬಗೆಯ ವ್ಯಸನಗಳು ಯುವ ಜನಾಂಗವನ್ನು ಆಕರ್ಷಿಸುತ್ತಿದ್ದು, ಇವುಗಳ ಅಪಾಯ ವ್ಯಸನಿಗಳ ಕುಟುಂಬಕ್ಕೆ ಮಾತ್ರವಲ್ಲದೇ ಸಮಾಜಕ್ಕೂ ತಟ್ಟುತ್ತದೆ. ಸದೃಢ ಸಮಾಜ ಕಟ್ಟಲು ಯುವಜನಾಂಗ ವ್ಯಸನಮುಕ್ತರಾಗುವುದು ಅವಶ್ಯಕವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರು ಗದಗ ನಗರದ ವಾರ್ಡ್ ನಂ.15 ಹಾಗೂ 16 ರಲ್ಲಿ ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ವ್ಯಸನ ಮುಕ್ತ ಸಮಾಜ ಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಅತಿ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದು ಧನಾತ್ಮಕ ಸಂಗತಿಯಾಗಿದೆ ಎಂದರು.

ಯುವಕರು ವ್ಯಸನ-ನಶೆ-ಆಕರ್ಷಣೆಗಳಿಂದ ಹೊರಬರಲು ಸೃಜನಾತ್ಮಕ-ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಎಷ್ಟೇ ಅರಿವಿದ್ದರೂ ಸುಶಿಕ್ಷಿತರು ಸಹ ಅಂಥ ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದ್ದು, ಮಹಾನ್ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡಾಗ ಇಂಥ ಚಟಗಳಿಂದ ಹೊರಬರಲು ಸಾಧ್ಯ ಎಂದರು. ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಮಾತನಾಡಿ, ಜಾತ್ರೆಗಳಲ್ಲಿ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಪದ್ಧತಿಯನ್ನು ಜಾರಿಗೆ ತಂದ ಕೀರ್ತಿ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಎಂದರು. ಪಾದಯಾತ್ರೆಯು ಶಹಾಪೂರಪೇಟೆಯಿಂದ ಆರಂಭವಾಗಿ ಡಿಸಿ ಮಿಲ್ ರಸ್ತೆ, ಡೋರಗಲ್ಲಿ, ಹೊಂಬಳನಾಕಾ ಮಾರ್ಗವಾಗಿ ಗಂಗಾಪೂರಪೇಟೆಯ ದುರ್ಗಾ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ನೂರಾರು ಭಕ್ತರು ಪಾದಯಾತ್ರೆಯಲ್ಲಿ ಶ್ರೀಗಳೊಂದಿಗೆ ಹೆಜ್ಜೆಹಾಕಿದರು. ಭೈರನಟ್ಟಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ಪಾದಯಾತ್ರೆಯ ಯಶಸ್ಸಿಗೆ ಕೈಜೋಡಿಸಿದ ಎಲ್ಲರಿಗೂ ಜಾತ್ರಾ ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದರು. ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು.