ಧಾರವಾಡದ ಸಾಹಿತ್ಯ ಭವನದಲ್ಲಿ ಅಖಿತ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‌) ಎರಡನೇ ತಾಲೂಕು ಸಮ್ಮೇಳನ ನಡೆಯಿತು. ತಾಲೂಕು ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಧಾರವಾಡ: ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಬಲ ಹೋರಾಟದ ಆವಶ್ಯಕತೆ ಇದೆ ಎಂದು ಎಐಕೆಕೆಎಂಎಸ್‌ ರಾಜ್ಯಾಧ್ಯಕ್ಷ ಎಂ. ಶಶಿಧರ ಹೇಳಿದರು.

ಇಲ್ಲಿಯ ಸಾಹಿತ್ಯ ಭವನದಲ್ಲಿ ನಡೆದ ಅಖಿತ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‌) ಎರಡನೇ ತಾಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಇಲ್ಲಿ ರೈತ ಕೃಷಿ ಕಾರ್ಮಿಕರು ವೈಚಾರಿಕವಾಗಿ ಸಜ್ಜಾಗಬೇಕಾಗಿದೆ. ಸರ್ಕಾರಗಳೇ ರೈತ ಕೃಷಿ ಕಾರ್ಮಿಕರ ವಿರೋಧಿ ನೀತಿ ಜಾರಿಗೊಳಿಸುತ್ತ, ಬಂಡವಾಳಿಗರ ಸೇವೆ ಮಾಡುತ್ತಿವೆ ಎಂದು ಹೇಳಿದರು.

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ತುತ್ತು ಅನ್ನ ಕಸಿಯುತ್ತಿರುವ ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಇನ್ನು ಮುಂದೆ ನರೇಗಾ ಕೂಲಿ ಕೇಳುವ ಹಕ್ಕನ್ನೇ ನಿರಾಕರಿಸಲಾಗುತ್ತದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 40 ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಒಟ್ಟಾರೆಯಾಗಿ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ, ನರೇಗಾ ಕೂಲಿಗೆ ತಿಲಾಂಜಲಿ ಇಟ್ಟು, ಗ್ರಾಮೀಣ ಭಾಗದ ಜನರನ್ನು ಬೀದಿಪಾಲು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಗರಹುಕುಂ ಸಾಗುವಳಿದಾರರು ಹಕ್ಕುಪತ್ರ ಕೇಳಲು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ರೀತಿಯ ಸಕಾರಾತ್ಮಕವಾಗಿ ಸರ್ಕಾರಗಳಿಂದ ಸ್ಪಂದನೆ ಸಿಕ್ಕಿಲ್ಲ. ವಿದ್ಯುತ್ ಮಸೂದೆ ೨೦೨೫ರ ಮೂಲಕ ವಿದ್ಯುತ್ತನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ, ಸ್ಮಾರ್ಟ್ ಮೀಟರ್ ಅಳವಡಿಸಿ, ರೈತರ ಹೊಲಗಳ ಪಂಪ್‌ಸೆಟ್‌ಗಳಿಗೂ ಮೀಟರ್ ಅಳವಡಿಸಿ, ಕೃಷಿ ಕ್ಷೇತ್ರ ದಿವಾಳಿ ಮಾಡುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ರೈತರ ಯಾವ ಸಮಸ್ಯೆಗೂ ಸ್ಪಂದಿಸಲಾಗಿಲ್ಲ. ಅಮೆರಿಕದೊಂದಿಗೆ ಒಪ್ಪಂದದಿಂದಾಗಿ ಅಮೆರಿಕದಿಂದ ಎಲ್ಲ ಕೃಷಿ ಉತ್ಪನ್ನಗಳು ಕಡಿಮೆ ದರದಲ್ಲಿ ಭಾರತಕ್ಕೆ ಬರಲಿವೆ. ಹೀಗಾದರೆ ನಮ್ಮ ದೇಶದ ರೈತರು ಬೆಳೆದ ಬೆಳೆಗಳನ್ನು ಕೊಂಡುಕೊಳ್ಳುವವರು ಯಾರು? ಈ ದೇಶದ ರೈತ ಹಿತಾಸಕ್ತಿಗೆ ಬೆಂಕಿ ಇಟ್ಟಿವೆ ಎಂದು ಆರೋಪಿಸಿದರು.

ಸಮ್ಮೇಳನದಲ್ಲಿ ಕನಿಷ್ಠ ಬೆಂಬಲ ಬೆಲೆ, ವಿದ್ಯುತ್ ಮಸೂದೆ ೨೦೨೫, ವಿಬಿ ಜಿ ರಾಮ್ ಜಿ ಮಸೂದೆ ಹಿಂಪಡೆಯಲು ನರೇಗಾ ಯೋಜನೆ ಬಲಪಡಿಸಲು ಹಾಗೂ ಬಗರ ಹುಕುಂ ಸಾಗುವಳಿದಾರರ ಹಕ್ಕುಪತ್ರ ನೀಡಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚುವ ವಿರುದ್ಧ ಹೋರಾಟದ ಕುರಿತು ಗೊತ್ತುವಳಿ ಸ್ವೀಕರಿಸಲಾಯಿತು. ಸಮಿತಿಗೆ ಪದಾಧಿಕಾರಿಗಳ ಆಯ್ಕೆ: ಹೊಸ ತಾಲೂಕು ಸಮಿತಿಯಲ್ಲಿ ತಾಲೂಕು ಅಧ್ಯಕ್ಷರಾಗಿ ರಾಣಪ್ಪ ಸಾವಂತನೂರ, ಉಪಾಧ್ಯಕ್ಷರಾಗಿ ಕಲ್ಲಪ್ಪ ಏಣಿಗಿ, ಕಾರ್ಯದರ್ಶಿಗಳಾಗಿ ಗೋವಿಂದ ಕೃಷ್ಣಪ್ಪನವರ, ಸಹ ಕಾರ್ಯದರ್ಶಿಯಾಗಿ ಮಂಜುನಾಥ ಪಾಟೀಲ್, ಕಚೇರಿ ಕಾರ್ಯದರ್ಶಿಯಾಗಿ ಗಂಗಪ್ಪ ಕಂಡೋಜಿ ಸೇರಿದಂತೆ ೨೦ ಜನರ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಧಾರವಾಡ ತಾಲೂಕು ಕಾರ್ಯದರ್ಶಿ ಗೋವಿಂದ ಕೃಷ್ಣಪ್ಪನವರ, ಎಐಕೆಕೆಎಂಎಸ್‌ ಪದಾಧಿಕಾರಿಗಳು ಇದ್ದರು.