ಸಾರಾಂಶ
ಉಳ್ಳಾಲ : ವಿದ್ಯುತ್ ಶಾಕ್ ತಗಲಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಸಹಪಾಠಿಯೇ ರಕ್ಷಿಸಿದ ಘಟನೆ ಮುಡಿಪು ಸಮೀಪದ ಇರಾ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ 5ನೇ ತರಗತಿ ವಿದ್ಯಾರ್ಥಿನಿ ಶರಫೀಯ ಮಧ್ಯಾಹ್ನ ಊಟದ ಸಮಯದಲ್ಲಿ ಫ್ಯಾನ್ ಸ್ವಿಚ್ ಹಾಕಲು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿತ್ತು ಎನ್ನಲಾಗಿದೆ. ಆಕೆ ಗೋಡೆಗೆ ತಾಗಿಕೊಂಡು ಮೌನವಾಗಿದ್ದನ್ನು ಗಮನಿಸಿದ ವಿದ್ಯಾರ್ಥಿನಿ ಫಾತಿಮತುಲ್ ಅಶ್ಫಿಯಾ, ಸಮಯ ಪ್ರಜ್ಞೆ ಮೆರೆದು ಊಟಕ್ಕಾಗಿ ಕೈಯಲ್ಲಿ ಹಿಡಿದಿದ್ದ ಬಟ್ಟಲನ್ನು ಗೆಳತಿಯ ಕೈಗೆ ಎಸೆದು ಬಾಲಕಿಯನ್ನು ರಕ್ಷಣೆ ಮಾಡಿದ್ದಾಳೆ. ಶರಫೀಯಳಿಗೆ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆ ಮುಖ್ಯ ಶಿಕ್ಷಕಿ ಸೋನಿಕಾ ಅವರು, ಶಾಲೆಯ ಮಧ್ಯಾಹ್ನದ ಊಟದ ವೇಳೆಯಲ್ಲಿ ಬಾಲಕಿಗೆ ವಿದ್ಯುತ್ ಶಾಕ್ ತಗುಲಿದಾಗ ಬಾಲಕಿ ಫಾತಿಮತುಲ್ ಅಶ್ಫಿಯಾ ಬಟ್ಟಲು ಎಸೆದು ಆಕೆಯನ್ನು ರಕ್ಷಣೆ ಮಾಡಿದ್ದಾಳೆ. ಬಳಿಕ ವಿದ್ಯಾರ್ಥಿನಿಯರ ಪೋಷಕರಲ್ಲೂ ಮಾತನಾಡಿದ್ದೇವೆ ಎಂದರು.ರಕ್ಷಣೆ ಮಾಡಿದ ಬಾಲಕಿ ಫಾತಿಮತುಲ್ ಅಶ್ಫಿಯಾ ತಂದೆ ಮುಜಿಬ್ ರಹ್ಮಾನ್ ಅವರು ಪ್ರತಿಕ್ರಿಯಿಸಿ, ಮಗಳು ಶಾಲೆಗೆ ಬಂದು ವಿದ್ಯುತ್ ಶಾಕ್ ತಗುಲಿದ್ದ ಬಾಲಕಿಯ ರಕ್ಷಣೆ ಮಾಡಿದ್ದನ್ನು ಮನೆಯಲ್ಲಿ ತಿಳಿಸಿದ್ದಳು. ಆಕೆಯ ಸಾಹಸಕ್ಕೆ ಹೆಮ್ಮೆಯಿದೆ ಎಂದರು. ವಿದ್ಯಾರ್ಥಿನಿ ಯ ಸಮಯ ಪ್ರಜ್ಞೆ ಮತ್ತು ಸಾಹಸಕ್ಕೆ ಇರಾ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.