ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ಮುಳುಗಿ ಸಾವು

| Published : Oct 27 2024, 02:43 AM IST

ಸಾರಾಂಶ

ಸದ್ಯಕ್ಕೆ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಉಪನ್ಯಾಸಕರಿಂದ 1 ಲಕ್ಷ ರು., ಡಿಡಿಪಿಐ ಕಚೇರಿಯಿಂದ 50 ಸಾವಿರ ರು. ಹಾಗೂ ಎನ್‌ಎಸ್‌ಎಸ್ ಕೇಂದ್ರ ಕಚೇರಿಯಿಂದ 1 ಲಕ್ಷ ರು. ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಂದ್ರೆ ಗ್ರಾಮದ ಹೊರವಲಯದ ಕೆರೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೈಸೂರು ತಾಲೂಕಿನ ಇಲವಾಲ ಹೋಬಳಿಯ ನಾಗವಾಲ ಗ್ರಾಮದ ಚನ್ನರಾಯ ಎಂಬುವರ ಪುತ್ರ ಗಜೇಂದ್ರ(17) ಮೃತ ವಿದ್ಯಾರ್ಥಿ.

ಮೃತ ವಿದ್ಯಾರ್ಥಿ ಗಜೇಂದ್ರ ಪಟ್ಟಣದ ಆರ್‌ಎಸ್‌ಎಸ್ ಕಚೇರಿಯಲ್ಲಿ ವಾಸ್ತವ್ಯ ಇದ್ದುಕೊಂಡು ಪಾಂಡವಪುರ ಪಟ್ಟಣದ ವಿಜಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ವಿಜಯ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಪಾಂಡವಪುರ ಚಂದ್ರೆ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸಿದ್ದನು.

ಅ.25ರಿಂದ ಆರಂಭಗೊಂಡಿದ್ದ ಶಿಬಿರದಲ್ಲಿ ಭಾಗವಹಿಸಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಶ್ರಮದಾನ ನಡೆಸಿ, ಬಳಿಕ ಸ್ನೇಹಿತರೊಂದಿಗೆ ಸ್ನಾನ ಮಾಡಲು ಚಂದ್ರೆ ಗ್ರಾಮದ ಹೊರವಲಯದಲ್ಲಿರುವ ಚಂದ್ರೆ ಕೆರೆಯ ಬಳಿ ತೆರಳಿದ್ದಾನೆ.

ಸ್ನೇಹಿತರೊಂದಿಗೆ ಹೋಗುತ್ತಿದ್ದ ಗಜೇಂದ್ರ ಎಲ್ಲರಿಗಿಂತ ನಾನೇ ಮೊದಲು ಹೋಗಬೇಕೆಂದು ಓಡಿಹೋಗಿ ಕೆರೆಯ ಆಳ ತಿಳಿಯದೆ ಸ್ನಾನ ಮಾಡಲೆಂದು ಕೆರೆಗೆ ಹಾರಿದ್ದಾನೆ. ಕೆರೆಗೆ ಹಾರಿದ ವಿದ್ಯಾರ್ಥಿ ಗಜೇಂದ್ರ ಮೇಲೆ ಬಾರದ ಹಿನ್ನೆಲೆಯಲ್ಲಿ, ಹಿಂದೆ ಬರುತ್ತಿದ್ದ ವಿದ್ಯಾರ್ಥಿಗಳು ಓಡಿಹೋಗಿ ಕೆರೆಗೆ ಇಳಿದು ಗಜೇಂದ್ರ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಕೆರೆ ಆಳ ಇದ್ದ ಪರಿಣಾಮ ಇಳಿಯದೆ ವಾಪಸ್ಸಾಗಿದ್ದಾರೆ.

ಸ್ಥಳೀಯರು ಪೊಲೀಸರಿಗೆ ವಿಷಯಮುಟ್ಟಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಕೆರೆಯಿಂದ ಹೊರಕ್ಕೆ ತೆಗೆದರು. ನಂತರ ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.

ಸಂಬಂಧಿಕರಿಂದ ಆಕ್ರೋಶ:

ಪಟ್ಟಣದ ಶವಗಾರದ ಬಳಿಕ ಮೃತರ ಸಂಬಂಧಿಕರು ಕಾಲೇಜಿನ ಆಡಳಿತ ಮಂಡಳಿ, ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಉಪನ್ಯಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಅವರನ್ನು ಸಹ ತರಾಟೆಗೆ ತೆಗೆದುಕೊಂಡರು.

ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿ ಎರಡು ಮೂರು ಗಂಟೆಯಾದರು ಕಾಲೇಜಿನ ಆಡಳಿತ ಮಂಡಳಿ, ಎನ್‌ಎಸ್‌ಎಸ್ ಅಧಿಕಾರಿಗಳು ಆಗಮಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಘಟನೆ ಮಧ್ಯಾಹ್ನ ನಡೆದರೂ ಪೋಷಕರಿಗೆ ಮಾಹಿತಿ ನೀಡದೆ ಮೃತ ದೇಹವನ್ನು ಏಕೆ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದೀರಿ ಎಂದು ಉಪನ್ಯಾಸಕರು, ಎನ್‌ಎಸ್‌ಎಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಎನ್‌ಎಸ್‌ಎಸ್ ಅಧಿಕಾರಿಗಳ ಬೇಜಬ್ದಾರಿಯಿಂದಲೇ ಘಟನೆ ಸಂಭವಿಸಿದೆ ಎಂದು ಆರೋಪಿಸಿದರು.

25 ಲಕ್ಷ ರು. ಪರಿಹಾರಕ್ಕೆ ಬೇಡಿಕೆ:

ಪ್ರಕರಣ ಸಂಬಂಧ ಆಡಳಿತ ಮಂಡಳಿಯಿಂದ 25 ಲಕ್ಷಕ್ಕೆ ಮೃತರ ಸಂಬಂಧಿಕರು ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆ ನಿರ್ದೇಶಕಿ ಹಾಗೂ ರೈತ ನಾಯಕಿ ಸುನಿತ ಪುಟ್ಟಣ್ಣಯ್ಯ ಅವರು ಸಂಸ್ಥೆ ಆಡಳಿತ ಮಂಡಳಿಯವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ವಿದೇಶದಿಂದ ಬಂದ ಬಳಿಕ ಚರ್ಚಿಸಿ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಸದ್ಯಕ್ಕೆ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಉಪನ್ಯಾಸಕರಿಂದ 1 ಲಕ್ಷ ರು., ಡಿಡಿಪಿಐ ಕಚೇರಿಯಿಂದ 50 ಸಾವಿರ ರು. ಹಾಗೂ ಎನ್‌ಎಸ್‌ಎಸ್ ಕೇಂದ್ರ ಕಚೇರಿಯಿಂದ 1 ಲಕ್ಷ ರು. ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಒಪ್ಪದ ಮೃತರ ಸಂಬಂಧಿಕರು ಪ್ರಕರಣ ಸಂಬಂಧ 25 ಲಕ್ಷ ಪರಿಹಾರ ನೀಡಬೇಕು. ಸ್ಥಳದಲ್ಲಿಯೇ 5 ಲಕ್ಷ ರು. ನೀಡಬೇಕು, ಉಳಿದ ಹಣವನ್ನು ನಂತರ ನೀಡಬೇಕು ಎಂದು ಒತ್ತಾಯಿಸಿದರು. ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.