ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಜೀವನ್ಮುಖಿ ಮತ್ತು ಚರಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶನಿವಾರ ಅವ್ವಸಂತೆ-೨೦ ಜನಾಕರ್ಷಣೆಗೆ ಪಾತ್ರವಾಯಿತು. ೨೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.
ಸಾಗರ: ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಜೀವನ್ಮುಖಿ ಮತ್ತು ಚರಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶನಿವಾರ ಅವ್ವಸಂತೆ-೨೦ ಜನಾಕರ್ಷಣೆಗೆ ಪಾತ್ರವಾಯಿತು. ೨೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಮಣ್ಣು ಬೀಜಗಳಿಂದ ತಯಾರಿಸಿದ ಆಭರಣಗಳು, ಬಾಳೆನಾರಿನ ಉತ್ಪನ್ನಗಳು, ರಾಸಾಯನಿಕ ಮುಕ್ತ ದವಸ ಧಾನ್ಯಗಳು, ಕೈಮಗ್ಗದಲ್ಲಿ ನೈಸರ್ಗಿಕ ಬಣ್ಣಗಳಿಂದ ತಯಾರಾದ ವಸ್ತ್ರಗಳು, ಮಲೆನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಮಸಾಲೆ ಪದಾರ್ಥಗಳು ಸಂತೆಯ ಪ್ರಮುಖ ಆಕರ್ಷಣೆಯಾಗಿತ್ತು. ಇದರ ಜೊತೆಗೆ ಹಪ್ಪಳ ಸಂಡಿಗೆ, ಹಲಸು ಮಾವಿನ ಖಾದ್ಯಗಳು ಗಮನ ಸೆಳೆಯಿತು. ಮಣ್ಣಿನ, ಲೋಹದ ಕಲಾಕೃತಿಗಳು ಪ್ರದರ್ಶನದ ಜೊತೆಗೆ ಮಾರಾಟದಲ್ಲಿ ಕಾಣಿಸಿಕೊಂಡಿತು. ರಾಜ್ಯದ ವಿವಿಧ ಭಾಗಗಳಿಂದ ಮಹಿಳಾ ಕುಶಲಕರ್ಮಿಗಳು ಅವ್ವಸಂತೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸಿದ್ದು, ಗ್ರಾಹಕರು ಅದನ್ನು ಖರೀದಿಸಿದ್ದು ತಮಗೆ ಸಂತೋಷ ತಂದಿದೆ ಎಂದು ಮಹಿಳಾ ಉದ್ಯಮಿಗಳು ತಮ್ಮ ಹರ್ಷ ವ್ಯಕ್ತಪಡಿಸಿದರು. ಮಹಿಳೆಯರದ್ದೇ ಸಾರಥ್ಯ: ೨೦ನೇ ಅವ್ವ ಸಂತೆ ಯಶಸ್ವಿಯಾಗಿ ನಡೆದಿದೆ. ಸಂತೆಗೆ ಮಹಿಳೆಯರದ್ದೇ ಸಾರಥ್ಯ ಎನ್ನುವ ಮಾತು ಕೇವಲ ಘೋಷಣೆಯಾಗಿಲ್ಲ. ಇಲ್ಲಿ ಕಾರ್ಯರೂಪಕ್ಕೆ ಬಂದಿದೆ. ಪ್ರತಿಯೊಂದು ಮಳಿಗೆಯಲ್ಲೂ ಮಹಿಳೆಯರೇ ಆತ್ಮವಿಶ್ವಾಸದಿಂದ ಗ್ರಾಹಕರೊಂದಿಗೆ ಸಂವಾದ ನಡೆಸಿ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ಕಷ್ಟನಷ್ಟಗಳನ್ನು ಹೇಳುತ್ತಲೇ ಗ್ರಾಹಕರ ಇಷ್ಟದ ವಸ್ತುಗಳನ್ನು ನೀಡಿ ಅವರ ಮನ ಗೆದ್ದಿದ್ದಾರೆ. ವ್ಯಾಪಾರಕ್ಕಿಂತ ಹೆಚ್ಚಾಗಿ ಮಹಿಳೆಯರು ಸ್ವಾಭಿಮಾನಿ ಬದುಕಿಗೆ ಬೆಂಬಲ ನೀಡುವ ಸಾಮಾಜಿಕ ಪ್ರಯತ್ನ ಇದಾಗಿದೆ ಎಂದು ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ತಿಳಿಸಿದರು. ಚರಕ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಪದ್ಮಶ್ರೀ ಇನ್ನಿತರರು ಹಾಜರಿದ್ದರು.