ಎಲ್ಲ ಮಕ್ಕಳಂತೆ ವಿಶೇಷಚೇತನ ಮಕ್ಕಳಲ್ಲಿಯೂ ಒಂದೊಂದು ವಿಶೇಷ ಪ್ರತಿಭೆಗಳಿವೆ. ಅವರಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಗಳನ್ನು ಸಂಘ ಸಂಸ್ಥೆಗಳು ಕಲ್ಪಿಸಬೇಕು ಎಂದು ಜಿಲ್ಲಾ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್ ಹೇಳಿದ್ದಾರೆ.

- ನಟ ಡಾ.ಪುನೀತ್ ಪುಣ್ಯಸ್ಮರಣೆ, ರಾಜ್ಯೋತ್ಸವದಲ್ಲಿ ವಾಸುದೇವ ರಾಯ್ಕರ್‌ ಅಭಿಮತ- - -

ಕನ್ನಡಪ್ರಭ ವಾರ್ತೆ ದಾವಣಗೆರೆಎಲ್ಲ ಮಕ್ಕಳಂತೆ ವಿಶೇಷಚೇತನ ಮಕ್ಕಳಲ್ಲಿಯೂ ಒಂದೊಂದು ವಿಶೇಷ ಪ್ರತಿಭೆಗಳಿವೆ. ಅವರಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಗಳನ್ನು ಸಂಘ ಸಂಸ್ಥೆಗಳು ಕಲ್ಪಿಸಬೇಕು ಎಂದು ಜಿಲ್ಲಾ ಯೋಗ ಒಕ್ಕೂಟ ಅಧ್ಯಕ್ಷ ವಾಸುದೇವ ರಾಯ್ಕರ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಡಾ.ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸವಿನೆನಪಿಗಾಗಿ, ಕನ್ನಡ ರಾಜ್ಯೋತ್ಸವ ಅಂಗವಾಗಿ ಎ-ಎಂ ಟು ಪಿ-ಎಂ ಡ್ಯಾನ್ಸ್ ಟ್ರೂಫ್ ವತಿಯಿಂದ ಆಯೋಜಿಸಿದ ವಿಕಲಚೇತನರ ನೃತ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಇದು ವಿಶೇಷಚೇತನ ಮಕ್ಕಳ ಕಾರ್ಯಕ್ರಮ ಅಲ್ಲ, ದೇವರ ಮಕ್ಕಳ ಕಾರ್ಯಕ್ರಮವಾಗಿದೆ. ಈ ಸಮಾರಂಭ ನೋಡುವ ಭಾಗ್ಯ ಇಂದು ನಮ್ಮದಾಗಿದೆ. ಎಲ್ಲ ವರ್ಗದವರಿಗೂ ವಿವಿಧ ಕಾರ್ಯಕ್ರಮಗಳನ್ನು ಎಲ್ಲರೂ ಆಯೋಜಿಸುತ್ತಾರೆ. ಆದರೆ ವಿಶೇಷಚೇತನರಿಗಾಗಿಯೇ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಸ್ಪರ್ಧೆ ಆಯೋಜನೆ ದಾವಣಗೆರೆಯಲ್ಲಿಯೇ ಮೊದಲು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇಂತಹ ವಿಶೇಷಚೇತನ ಮಕ್ಕಳಿಗಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚು ಕಾರ್ಯಕ್ರಮಗಳು ದಾವಣಗೆರೆಯಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ ಮಾತನಾಡಿ, ನಾವು ಕನ್ನಡ ರಾಜ್ಯೋತ್ಸವವನ್ನು ನ.1 ರಂದು ಅಥವಾ 1 ತಿಂಗಳು ಆಚರಿಸುತ್ತಿದ್ದೇವೆ. ಈಗ ಅದು ಡಿಸೆಂಬರ್, ಜನವರಿಗೂ ಮುಂದುವರಿದಿದೆ. ನ.1 ಕನ್ನಡ ರಾಜ್ಯೋತ್ಸವ ಆಗದೇ ಅದು ನಂಬರ್ 1 ಕನ್ನಡ ರಾಜ್ಯೋತ್ಸವ ಆಗಿ ವರ್ಷವಿಡೀ ಆಚರಿಸುವಂತಾಗಲಿ ಎಂದರು.ಹಿರಿಯ ನಾಗರೀಕರ ವಿಶೇಷಚೇತನರ ಸಬಲೀಕರಣ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ. ಕೆ.ಕೆ.ಪ್ರಕಾಶ ಮಾತನಾಡಿ, ನಮ್ಮ ಮಕ್ಕಳು ವಿಕಲಚೇತನರು ಎಂದು ಯಾವತ್ತೂ ಚಿಂತಿಸಬೇಕಿಲ್ಲ. ಅವರು ವಿಶೇಷಚೇತನ ಮಕ್ಕಳು. ನಿಮ್ಮ ಮಾತನ್ನು ಮೀರಿ ಹೋಗುವುದಿಲ್ಲ. ಅವರು ದೇವರ ಸ್ವರೂಪ. ಇಂತಹ ಮಕ್ಕಳಿಂದ ನಿಮ್ಮಲ್ಲಿ ತಾಳ್ಮೆ, ಶ್ರದ್ಧೆ ಬರಲು ಸಾಧ್ಯವಾಗಿದೆ. ನಮ್ಮ ದಾವಣಗೆರೆಯಲ್ಲಿ ಸಿಆರ್‌ಸಿ ಕೇಂದ್ರ ಇದ್ದು ಇಂತಹ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ವಡ್ಡಿನಹಳ್ಳಿಯಲ್ಲಿ ಇಂತಹ ವಿಶೇಷ ಮಕ್ಕಳಿಗಾಗಿ ಸುಸಜ್ಜಿತವಾಗಿ ಚಿಕಿತ್ಸಾ ಕೇಂದ್ರವಿದ್ದು, ಥೆರಪಿ ನೀಡಲಾಗುತ್ತಿದೆ. ಈ ಮಕ್ಕಳ ಬಗ್ಗೆ ಪೋಷಕರು ಚಿಂತಿಸಬೇಕಿಲ್ಲ ಎಂದರು.ನಂದಗೋಕುಲ ಶಾಲೆ ಕಾರ್ಯದರ್ಶಿ ಅನಸೂಯಮ್ಮ ಮಾತನಾಡಿ, ಯಾವ ವ್ಯಕ್ತಿಯಲ್ಲಿ ಸರಳತೆ ಇರುತ್ತದೆಯೋ, ಜನಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೋ, ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾರೋ ಅವರು ಇಲ್ಲವಾದ ಮೇಲೂ ಎಲ್ಲರ ಜನಮಾನಸದಲ್ಲಿ ಉಳಿಯುತ್ತಾರೆ ಎನ್ನುವುದಕ್ಕೆ ಸಾಕ್ಷಿ ನಟ, ಮಾನವೀಯ ಕಳಕಳಿಯ ಪುನೀತ್ ರಾಜಕುಮಾರ್. ಅವರು ಅಂಧ, ಅನಾಥ, ಬಡವ, ವೃದ್ಧರಿಗೆ, ಬಡಮಕ್ಕಳಿಗೆ ಸಹಾಯಹಸ್ತ, ನೆರವು ನೀಡಿದ್ದಾರೆ. ಆ ಮೂಲಕ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ದಿಳ್ಯಪ್ಪ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಮಾಜಿ ಸೈನಿಕ ಮುರುಗೇಶ, ಎ-ಎಂ ಟು ಪಿ-ಎಂ ಡ್ಯಾನ್ಸ್ ಟ್ರೂಪಿನ ಹರ್ಷ-ರೇಖಾ ದಂಪತಿ, ನಾಗರಾಜ ಕಾಕನೂರು, ಮಾಲತೇಶ, ಸಾಹಸ ನಿರ್ದೇಶಕ ಚಿರತೆ ನಾಗರಾಜ, ಕೃಷ್ಣಪ್ಪ, ಜ್ಯೂನಿಯರ್ ಪುನಿತ್ ರಾಜಕುಮಾರ, ಪತ್ರಕರ್ತರಾದ ಎಸ್.ಜೆ.ಕಿರಣ್, ಚನ್ನಬಸವ ಶೀಲವಂತ್, ವಿವಿಧ ಶಾಲಾ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ವಿಶೇಷಚೇತನ ಶಾಲೆ ಮಕ್ಕಳು ಸ್ಪರ್ಧೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.- - --18ಕೆಡಿವಿಜಿ35:ದಾವಣಗೆರೆಯಲ್ಲಿ ನಡೆದ ವಿಶೇಷಚೇತನರ ನೃತ್ಯ ಪ್ರದರ್ಶನ, ಪುನೀತ್ ರಾಜಕುಮಾರ ಪುಣ್ಯಸ್ಮರಣೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಾಸುದೇವ ರಾಯ್ಕರ್‌ ಉದ್ಘಾಟಿಸಿದರು.