ಸಾರಾಂಶ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದಾಗ ಬಿಜೆಪಿಯ ಹಿರಿಯ ನಾಯಕರೊಬ್ಬರು ಆದಾಯ ತೆರಿಗೆ ಲೆಕ್ಕಪರಿಶೋಧಕರ ಮೂಲಕ ಉಪಮುಖ್ಯಮಂತ್ರಿ ಸ್ಥಾನದ ಆಮಿಷ ಒಡ್ದಿದ್ದರು.
ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಶಾಸಕರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದಾಗ ಬಿಜೆಪಿಯ ಹಿರಿಯ ನಾಯಕರೊಬ್ಬರು ಆದಾಯ ತೆರಿಗೆ ಲೆಕ್ಕಪರಿಶೋಧಕರ ಮೂಲಕ ಉಪಮುಖ್ಯಮಂತ್ರಿ ಸ್ಥಾನದ ಆಮಿಷ ಒಡ್ದಿದ್ದರು. ಒಪ್ಪದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆಯನ್ನೂ ಹಾಕಿದ್ದರು. ಆದರೆ, ನಾನು ಪಕ್ಷ ನಿಷ್ಠೆ ಮೆರೆದು ಡಿಸಿಎಂ ಹುದ್ದೆಗಿಂತ ಜೈಲನ್ನು ಆಯ್ಕೆ ಮಾಡಿಕೊಂಡೆ. ಹೀಗಂತ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಪ್ರೇಕ್ಷಿತ್ ಪಬ್ಲಿಕೇಷನ್‌ನಿಂದ ಬುಧವಾರ ಆಯೋಜಿಸಿದ್ದ ಲೇಖಕ ಕೆ.ಎಂ.ರಘು ಅವರ ‘ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ.ಶಿವಕುಮಾರ್’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ನನ್ನ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಲ್ಲದೆ, ಪ್ರಕರಣವನ್ನೂ ದಾಖಲಿಸಿದ್ದಾರೆ. ಆದರೂ, 2018ರಲ್ಲಿ ನನ್ನ ಮನಸ್ಸಿಗೆ ಒಪ್ಪಿಗೆ ಇತ್ತೋ, ಇಲ್ಲವೋ ಪಕ್ಷದ ನಿಷ್ಠೆ ಮತ್ತು ನನ್ನ ನಾಯಕರ ಸೂಚನೆ ಮೇರೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಲು ಶ್ರಮಿಸಿದೆ. ಎಚ್.ಡಿ.ಕುಮಾರಸ್ವಾಮಿ ಕೈ ಹಿಡಿದು ಮೇಲೆತ್ತುವ ಸಂದರ್ಭವೂ ಬಂತು ಎಂದು ಸ್ಮರಿಸಿದರು.
ಅದೇ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ನಮ್ಮ ಪಕ್ಷದ ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಕೆಲ ಶಾಸಕರನ್ನು ಕರೆದುಕೊಂಡು ನನ್ನ ಮನೆಯಲ್ಲಿರಿಸಿ ಮಾತುಕತೆ ನಡೆಸಿದ್ದೆ. ಆಗ ಬಿಜೆಪಿಯ ಕೇಂದ್ರ ನಾಯಕರೊಬ್ಬರು ಆದಾಯ ತೆರಿಗೆ ಇಲಾಖೆ ಲೆಕ್ಕಪರಿಶೋಧಕರ ಮೂಲಕ ನನಗೆ ಕರೆ ಮಾಡಿಸಿ, ನನ್ನ ಬಳಿಯಿರುವ ಶಾಸಕರನ್ನು ಕೂಡಲೇ ಬಿಟ್ಟು ಕಳುಹಿಸುವಂತೆ ತಿಳಿಸಿದರು. ಅದಕ್ಕೆ ಬದಲಾಗಿ ಉಪ ಮುಖ್ಯಮಂತ್ರಿ ಮಾಡುವುದಾಗಿಯೂ ಆಮಿಷ ಒಡ್ಡಿದರು. ಇಲ್ಲದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆಯೊಡ್ಡಿದರು. ನಾನು ಪಕ್ಷ ನಿಷ್ಠನಾಗಿ ಜೈಲನ್ನು ಆಯ್ಕೆ ಮಾಡಿಕೊಂಡನೇ ಹೊರತು ಶಾಸಕರನ್ನು ಬಿಡಲಿಲ್ಲ. ಆಗಲೇ ನಾನು ಉಪಮುಖ್ಯಮಂತ್ರಿ ಆಗಬಹುದಿತ್ತು. ಹಾಗೇನಾದರೂ ಆಗಿದ್ದರೆ ಈಗ ರಾಜಕೀಯ ಚಿತ್ರಣವೇ ಬೇರೆ ಇರುತ್ತಿತ್ತು ಎಂದು ಹೇಳಿದರು.
ಪ್ರತಿಯೊಬ್ಬರೂ ಯಾವಾಗಲೂ ಗೆಲುವು ಸಾಧಿಸಲಾಗದು. ಹೀಗಾಗಿ ನಾನು ಸೋಲು ಮತ್ತು ನನ್ನ ವಿರುದ್ಧದ ಟೀಕೆಯನ್ನು ಸಮನಾಗಿ ಸ್ವೀಕರಿಸುತ್ತೇನೆ. ಅಲ್ಲದೆ, ನನ್ನ ವಿರೋಧಿಗಳು ಪ್ರತಿದಿನ ನನ್ನ ವಿರುದ್ಧ ಹಲವು ಆರೋಪ ಮಾಡುತ್ತಿರುತ್ತಾರೆ. ಅವರಿಗೆ ಸಂತೋಷವಾಗುತ್ತದೆ ಎಂಬ ಕಾರಣಕ್ಕಾಗಿ ನಾನು ಅದನ್ನು ಸ್ವೀಕರಿಸುತ್ತಿದ್ದೇನೆ. ಹಳ್ಳಿಯಿಂದ ಬಂದ ನನ್ನನ್ನು ಇಷ್ಟು ದೊಡ್ಡ ನಾಯಕನ್ನಾಗಿ ಮಾಡಿದ ನನ್ನ ಕ್ಷೇತ್ರದ ಮತ್ತು ರಾಜ್ಯದ ಜನರಿಗೆ ನಮಸ್ಕರಿಸುತ್ತೇನೆ. ಜೈಲಿನಲ್ಲಿದ್ದಾಗಲೂ ನನ್ನ ಜನ ನನ್ನನ್ನು ಕೈ ಬಿಡಲಿಲ್ಲ ಎಂದರು.
ಬೆಂಗಳೂರಿನಲ್ಲಿ 500 ಕಾರ್ಪೋರೇಟರ್‌ಗಳು:
ರಾಜೀವ್ ಗಾಂಧಿ ಅವರು ಹೊಸ ನಾಯಕನನ್ನು ಸೃಷ್ಟಿಸಬೇಕು ಎಂದು ಹೇಳಿದ್ದರು. ಅದರಂತೆ ನಮ್ಮ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿ 5 ನಗರ ಪಾಲಿಕೆ ರಚಿಸಿ 369 ವಾರ್ಡ್‌ಗಳನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಅದನ್ನು 500ಕ್ಕೆ ಹೆಚ್ಚಿಸುವ ಮೂಲಕ 500 ಹೊಸ ನಾಯಕರನ್ನು ಸೃಷ್ಟಿಸಲಾಗುವುದು. ಪಕ್ಷದಲ್ಲಿ ಕೇವಲ ಶೇ.20ರಷ್ಟು ಮಂದಿಗೆ ಮಾತ್ರ ಅಧಿಕಾರ ಸಿಕ್ಕಿದೆ. ಇನ್ನೂ ಶೇ. 80ರಷ್ಟು ಕಾರ್ಯಕರ್ತರು, ಮುಖಂಡರು ಪಕ್ಷದ ಕೆಲಸ ಮಾಡುತ್ತಲೇ ಇದ್ದಾರೆ. ಅವರಿಗೂ ಅಧಿಕಾರ ಸಿಗುವಂತೆ ಮಾಡಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಡಿಕೆಶಿ 2023ರಲ್ಲೇ ಸಿಎಂ ಆಗಬೇಕಿತ್ತು:
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ, 2023ರಲ್ಲಿಯೇ 136 ಸ್ಥಾನಗಳನ್ನು ಗೆಲ್ಲಿಸಿದ್ದ ಅವರು ಸಿಎಂ ಸ್ಥಾನಕ್ಕೇರಬೇಕಿತ್ತು. ಅವರು ಮುಂದೆ ಖಂಡಿತ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದಾಗ, ಅವರನ್ನು ಕರೆತರಲು ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಿದ್ದರು. ಆಗ ಸಾಮಾನ್ಯ ಕಾರ್ಯಕರ್ತರಂತೆ ರಸ್ತೆಯಲ್ಲಿ ನಿಂತಿ ಶಾಸಕರಿಗಾಗಿ ಕಾಯುತ್ತಿದ್ದರು. ಅವರು ಮಾಡಿದ ಕೆಲಸವನ್ನು ಆಗ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಮಾಡಬೇಕಿತ್ತು. ಆದರೆ, ಅವರು ಮಾಡಲಿಲ್ಲ. ಈಗ ಅದನ್ನು ಕುಮಾರಸ್ವಾಮಿ ಸ್ಮರಿಸುತ್ತಿಲ್ಲ ಎಂದರು.
ರಸ್ತೆ ಗುಂಡಿ ಸರಿಮಾಡಿ:
ಸಾಹಿತಿ ಪ್ರೊ. ಭಕ್ತರಹಳ್ಳಿ ಕಾಮರಾಜ್ ಮಾತನಾಡಿ, ಬೆಂಗಳೂರಿನ ರಸ್ತೆಗಳು ಸರಿಯಿಲ್ಲ ಎಂದು ದೊಡ್ಡ ಚರ್ಚೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ಸ್ಥಿತಿಗತಿ ಸರಿಮಾಡುವತ್ತ ಡಿ.ಕೆ.ಶಿವಕುಮಾರ್ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ। ಚಂದ್ರಶೇಖರ ಕಂಬಾರ, ಸಾಹಿತಿಗಳಾ ಡಾ। ಆರ್.ಕೆ.ನಲ್ಲೂರು ಪ್ರಸಾದ್, ಡಾ। ಕರೀಗೌಡ ಬೀಚನಹಳ್ಳಿ ಇದ್ದರು.
ನಾನು ಸಿದ್ಧಪಡಿಸಿರುವ 2 ಕೃತಿ ಶೀಘ್ರ ಬಿಡುಗಡೆ
ನಾನೂ ಕೂಡ ಪುಸ್ತಕಗಳನ್ನು ಸಿದ್ಧಪಡಿಸಿದ್ದೇನೆ. ‘ನೀರಿನ ಹೆಜ್ಜೆ’ ಹೆಸರಿನ ಪುಸ್ತಕ ಸಿದ್ಧವಾಗಿದ್ದು, ನ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಅದೇ ರೀತಿ ‘ಗಾಂಧಿ ಭಾರತ’ ಪುಸ್ತಕ ಸಿದ್ಧಪಡಿಸಲಾಗುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಅದನ್ನು ಲೋಕಾರ್ಪಣೆ ಮಾಡಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದರು.