ಸಾಹಿತ್ಯವೆಂಬುದು ಕೇವಲ ಅಕ್ಷರ ಅಥವಾ ಪದಗಳ ಜೋಡಣೆಯಲ್ಲ, ಅದು ಮಾನವನ ಅನುಭವಗಳನ್ನು ಜೋಡಿಸುವ ಮಹತ್ತರ ಮಾರ್ಗವಾಗಿದೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ಸಾಹಿತ್ಯವೆಂಬುದು ಕೇವಲ ಅಕ್ಷರ ಅಥವಾ ಪದಗಳ ಜೋಡಣೆಯಲ್ಲ, ಅದು ಮಾನವನ ಅನುಭವಗಳನ್ನು ಜೋಡಿಸುವ ಮಹತ್ತರ ಮಾರ್ಗವಾಗಿದೆ. ಸಮಾಜದಲ್ಲಿ ಜಾಗೃತಿ, ಪರಿಸರ ಪ್ರಜ್ಞೆ, ಸಾಕ್ಷರತೆ ಹಾಗೂ ಸಕಾರಾತ್ಮಕ ಬದಲಾವಣೆಗಳನ್ನು ತರುವ ಅದ್ಭುತ ಶಕ್ತಿ ಸಾಹಿತ್ಯಕ್ಕಿದೆ ಎಂದು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಖ್ಯಾತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ. ನಿಂಗು ಸೊಲಗಿ ಅವರ ಬದುಕು-ಬರಹ ಹಾಗೂ ಕೃತಿಗಳ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ನಿಂಗು ಸೊಲಗಿ ಅವರು ಮಕ್ಕಳ ಸಾಹಿತ್ಯ, ನಾಟಕ ರಚನೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದರು.ಸ್ಥಳೀಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಡಿ.ಸಿ. ಮಠದ ಮಾತನಾಡಿ, ಡಾ. ನಿಂಗು ಸೊಲಗಿ ಸುಮಾರು 30ಕ್ಕೂ ಹೆಚ್ಚು ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ಮಕ್ಕಳ ನಾಟಕಗಳು, ಪರಿಸರ ಜಾಗೃತಿ ಹಾಗೂ ಬೀದಿ ನಾಟಕಗಳ ಮೂಲಕ ಸಮಾಜದಲ್ಲಿ ಸದಾ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ ಎಂದರು.
ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ಬಾಲವಿಕಾಸ ಅಕಾಡೆಮಿ ಹಾಗೂ ಶಾಲಾ ಹಂತದಲ್ಲಿ ನೂರಾರು ಮಕ್ಕಳಿಂದ ಕತೆಗಳನ್ನು ಬರೆಸಿದ್ದು, ನಾಶವಾಗುತ್ತಿದ್ದ ನೂರಕ್ಕೂ ಹೆಚ್ಚು ಜನಪದ ಆಟಗಳನ್ನು ಗುರುತಿಸಿ ದಾಖಲಿಸಿದ್ದು ನನ್ನ ಬದುಕಿನ ಅತ್ಯಂತ ತೃಪ್ತಿದಾಯಕ ಕಾರ್ಯಗಳು. ಮಕ್ಕಳಿಗೆ ಸಾಹಿತ್ಯ, ಕಲೆ ಮತ್ತು ಶಿಕ್ಷಣದ ಮೂಲಕ ಉತ್ತಮ ಸಂಸ್ಕಾರ ನೀಡುವುದು ನಮ್ಮ ಆದ್ಯತೆಯಾಗಬೇಕು ಎಂದರು.ತಾಲೂಕಾ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಬಿ. ಕರಿಭರಮಗೌಡ್ರ, ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ, ಡಾ. ವಿ.ಕೆ. ಸಂಕನಗೌಡ್ರ, ದ್ವಾರಕೀಶರಡ್ಡಿ, ಸಿ.ಎಸ್. ಚಕ್ಕಡಿಮಠ, ಆರ್.ವೈ. ಪಾಟೀಲ, ಸಿ.ಎಸ್. ಅರಸನಾಳ, ಕೃಷ್ಣಾ ಸಾಹುಕಾರ, ಎಸ್.ಸಿ. ಹರ್ತಿ, ಎಂ.ಎಸ್. ಶೀರನಹಳ್ಳಿ, ಎಸ್.ಎಸ್. ಮಠ, ವಿರೇಶ ಗಡ್ಡದೇವರಮಠ, ಎನ್.ಎಸ್. ಶೀರನಹಳ್ಳಿ ಸೇರಿ ಅನೇಕರಿದ್ದರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಶೆಟ್ಟರ ಸ್ವಾಗತಿಸಿ, ಎಸ್.ವಿ. ಪಾಟೀಲ ನಿರೂಪಿಸಿ, ಎಸ್.ಬಿ. ಪಾಟೀಲ ವಂದಿಸಿದರು.