ಸಾರಾಂಶ
ಕನ್ನಡಪ್ರಭವಾರ್ತೆ ಸಾಗರ
ಎಪಿಎಂಸಿ ಮಾರುಕಟ್ಟೆಗೆ ಅಡಕೆ ತರುತ್ತಿದ್ದ ಬೆಳೆಗಾರನ ವಾಹನ ತಡೆದು ವಾಣಿಜ್ಯ ತೆರಿಗೆ ಕಚೇರಿ ಆವರಣದಲ್ಲಿ ಇರಿಸಿಕೊಂಡು ಸತಾಯಿಸಿದ ಘಟನೆಗೆ ಸಂಬಂಧಿಸಿ ಅಡಕೆ ಬೆಳೆಗಾರರ ಸಂಘ ಮಾಡಿದ ಪ್ರತಿಭಟನೆಗೆ ಮಣಿದ ಮಾರಾಟ ತೆರಿಗೆ (ಸೇಲ್ಸ್ ಟ್ಯಾಕ್ಸ್) ಜಿಲ್ಲಾಧಿಕಾರಿ ಅಶೋಕ್ ಕ್ಷಮೆಯಾಚಿಸಿದ್ದಾರೆ.ತಾಲೂಕಿನ ಕುಡುಗುಂಜಿಯಿಂದ ಕೃಷ್ಣಮೂರ್ತಿ ಎಂಬ ಬೆಳೆಗಾರರು ಪಿಕಪ್ ವಾಹನದಲ್ಲಿ ೪೮ ಚೀಲ ಸಿಪ್ಪೆಗೋಟು ತುಂಬಿ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತರುತ್ತಿದ್ದರು. ಸಾಗರದ ಸಣ್ಣಮನೆ ಸೇತುವೆ ಬಳಿ ವಾಣಿಜ್ಯ ತೆರಿಗೆ ಇಲಾಖೆ ಜಿಲ್ಲಾಧಿಕಾರಿ ಅಶೋಕ್ ಮತ್ತಿತರರು ಪಿಕಪ್ ತಡೆದು ಆರ್ ಟಿಸಿ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಕೃಷ್ಣಮೂರ್ತಿ ತೆರಿಗೆಯನ್ನು ಎಪಿಎಂಸಿ ಪ್ರಾಂಗಣದಲ್ಲಿ ಪಾವತಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಮಾರಾಟ ತೆರಿಗೆ ಅಧಿಕಾರಿಗಳು ಅಡಕೆ ತುಂಬಿದ ವಾಹನ ಕಚೇರಿಯಲ್ಲಿ ತಂದು ನಿಲ್ಲಿಸಿ ಅನಗತ್ಯ ವಿಳಂಬ ಮಾಡಿದ್ದಾರೆ. ವಿಷಯ ತಿಳಿದ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ವಾಣಿಜ್ಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಯ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ರೈತರ ಸತಾಯಿಸಿದ್ದು ಖಂಡನೀಯ:ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಅಸಹಾಯಕ ರೈತ ಎಪಿಎಂಸಿಗೆ ಅಡಕೆ ಮಾರಾಟಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಏಕಾಏಕಿ ವಾಹನ ತಡೆದು ಪರಿಶೀಲನೆ ನೆಪದಲ್ಲಿ ರೈತರ ಸತಾಯಿಸಿದ್ದು ಖಂಡನೀಯ. ಬೆಳೆಗಾರರು ಅಡಕೆಯನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ಮಾರಬಹುದು ಎನ್ನುವ ಕಾನೂನು ಇದೆ. ಆದರೆ ಅಧಿಕಾರಿ ವಾಹನ ತಡೆದು ಕಚೇರಿಗೆ ತಂದು ಬೆಳೆಗಾರರ ಸತಾಯಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಬೆಳೆಗಾರರ ಪ್ರತಿಭಟನೆ ನಂತರ ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ್ ರೈತರ ಕ್ಷಮೆ ಯಾಚಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆದರೆ ಬೆಳೆಗಾರರ ಸಂಘ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಪ್ರಮುಖರಾದ ಯು.ಎಚ್.ರಾಮಪ್ಪ, ಬೇದೂರು ಗಿರಿ, ಎಂ.ಜಿ.ರಾಮಚಂದ್ರ, ಚೇತನರಾಜ್ ಕಣ್ಣೂರು, ರವಿಕುಮಾರ್, ಪ್ರವೀಣ್ ಕೆ.ವಿ., ವೆಂಕಟಗಿರಿ ಕುಗ್ವೆ, ಈಳಿ ಶ್ರೀಧರ್, ಎಂ.ಕೆ.ತಿಮ್ಮಪ್ಪ, ಹು.ಭಾ.ಅಶೋಕ್, ದಿನೇಶ್, ವಿರೂಪಾಕ್ಷ ಗೌಡ ಇನ್ನಿತರರಿದ್ದರು.