500 ಕಿಮೀ ಸೈಕಲ್ ತುಳಿದ 150 ಜನರ ತಂಡ

| Published : Nov 25 2023, 01:15 AM IST

ಸಾರಾಂಶ

ಎರಡು ತಿಂಗಳಿನಿಂದಲೇ ಸೈಕಲ್ ಅಡ್ವೆಂಚರ್‌ಗೆ ದೇಹವನ್ನು ಸಿದ್ಧಪಡಿಸಿಕೊಂಡ ತಂಡದ ಸದಸ್ಯರು ಮಲೆನಾಡಿನ ಘಟ್ಟ ಪ್ರದೇಶವಾದರೂ ಸೈಕಲ್ ಇಳಿಯದೇ ತುಳಿದುಕೊಂಡೇ ಬರುತ್ತಿದ್ದಾರೆ.

ಶಿರಸಿ:

ಸೈಕಲ್‌ ಮೇಲೆ ಈ ತಂಡ ಕರ್ನಾಟಕ ಪ್ರವಾಸ ನಡೆಸಿದೆ. ೧೫೦ ಜನರ ಬೆಂಗಳೂರಿನ ಈ ತಂಡ ಈಗ ಮಲೆನಾಡಿನಲ್ಲಿ ಸೈಕಲ್ ತುಳಿಯುತ್ತ ಶಿರಸಿಗೆ ಆಗಮಿಸಿದೆ.

ಹೌದು, ಸೈಕಲ್ ರೈಡಿಂಗ್ ಆರೋಗ್ಯಕ್ಕೆ ಒಳ್ಳೆಯದು. ಸೈಕಲ್ ಮೂಲಕ ರಾಜ್ಯದ ಗ್ರಾಮೀಣ ಬದುಕಿನ ಚಿತ್ರಣ, ಸ್ಥಳೀಯ ಜೀವ ವೈವಿಧ್ಯತೆ ಆಸ್ವಾದಿಸುತ್ತ ಈ ತಂಡ ಈಗ ಶಿರಸಿ ತಲುಪಿದೆ. ಬೆಂಗಳೂರಿನ ಚೇತನ್ ರಾಮ್ ನೇತೃತ್ವದಲ್ಲಿ ೨೦ಕ್ಕೂ ಅಧಿಕ ಮಹಿಳೆಯರೂ ಸೇರಿದಂತೆ ಬಂದಿರುವ ಈ ತಂಡದಲ್ಲಿ ವೈದ್ಯರಿ, ಎಂಜಿನಿಯರ್ಸ್‌, ವಿದ್ಯಾರ್ಥಿಗಳು ಇದ್ದಾರೆ. ಸೈಕಲ್ ಮೂಲಕ ಸುತ್ತುವ ಈ ಸಾಹಸವನ್ನು ಬೃಹತ್ ತಂಡದ ಮೂಲಕ ಮಾಡಲಾಗುತ್ತಿದೆ.

ಶಿವಮೊಗ್ಗದ ಮೂಲಕ ಸಾಗರ, ಭಟ್ಕಳ, ಮುರ್ಡೇಶ್ವರ, ಶಿರಸಿ ತಲುಪಿರುವ ಈ ತಂಡ ಶನಿವಾರ ದಾಂಡೇಲಿಗೆ ತೆರಳಲಿದ್ದು, ಒಟ್ಟೂ ೧೫೦ ಕಿಮೀ ಸಂಚರಿಸಲಿದೆ. ಪ್ರತಿ ದಿನ ಬೆಳಗ್ಗೆ ೬ ಗಂಟೆಗೆ ಸೈಕಲ್ ತುಳಿಯಲಾರಂಭಿಸಿದರೆ ಸಂಜೆ ೬ರ ವರೆಗೆ ಪ್ರಯಾಣಿಸಿ ಮತ್ತೆ ವಿಶ್ರಾಂತಿ ಪಡೆಯುತ್ತಿದೆ. ಬಸ್‌, ಕಾರಲ್ಲಿ ರಾಜ್ಯ ಸಂಚರಿಸಿದರೆ ಸ್ಥಳೀಯ ಪ್ರಕೃತಿ ಸೌಂದರ್ಯ ಆಸ್ವಾಧಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯರ ಜೊತೆ ಬೆರೆಯುವ ಅನುಭವನ್ನು ಈ ಸೈಕಲ್ ಅಡ್ವೆಂಚರ್ ನೀಡುತ್ತಿದೆ ಎನ್ನುತ್ತಾರೆ ತಂಡದ ಸದಸ್ಯರಾದ ನಾರಾಯಣ ಹೆಗಡೆ.

ತಂಡದ ಸದಸ್ಯ ನಾಗರಾಜ ಭಟ್ ಹೇಳುವಂತೆ ಕಳೆದ ೮ ವರ್ಷಗಳಿಂದ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಸೈಕಲ್ ಟೂರ್ ನಡೆಸುತ್ತಿದ್ದೇವೆ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಇದ್ದವರು ಆರಂಭಿಸಿದ ಈ ಪ್ರಯತ್ನಕ್ಕೆ ಪ್ರತಿ ವರ್ಷ ಉತ್ತಮ ಸ್ಪಂದನೆ ಜತೆಗೆ ಸದಸ್ಯರ ಸಂಖ್ಯೆಯೂ ಜಾಸ್ತಿ ಆಗುತ್ತಿದೆ ಎನ್ನುತ್ತಾರೆ.

ಎರಡು ತಿಂಗಳಿನಿಂದಲೇ ಸೈಕಲ್ ಅಡ್ವೆಂಚರ್‌ಗೆ ದೇಹವನ್ನು ಸಿದ್ಧಪಡಿಸಿಕೊಂಡ ತಂಡದ ಸದಸ್ಯರು ಮಲೆನಾಡಿನ ಘಟ್ಟ ಪ್ರದೇಶವಾದರೂ ಸೈಕಲ್ ಇಳಿಯದೇ ತುಳಿದುಕೊಂಡೇ ಬರುತ್ತಿದ್ದಾರೆ.ಸೈಕ್ಲಿಂಗ್‌ನಿಂದ ಹೃದಯದಲ್ಲಿ ಕಾರ್ಡಿಯಾಕ್ ಪಂಪಿಂಗ್‌ಗೆ ಉತ್ತಮ. ಜಾಯಿಂಟ್, ಕೀಲುಗಳು ಸುಸ್ಥಿತಿಯಲ್ಲಿ ಇರುತ್ತದೆ. ಮಾನಸಿಕ ಆರೋಗ್ಯಕ್ಕೂ ಸೈಕ್ಲಿಂಗ್ ಉತ್ತಮ ಎಂದು ಸೈಕ್ಲಿಂಗ್ ತಂಡದ ಸದಸ್ಯ ನಾಗರಾಜ ಭಟ್ ವೈದ್ಯ ಹೇಳಿದರು.