ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಜನಾಂಗದಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕಲು ರಂಗಭೂಮಿಯಿಂದ ಸಾಧ್ಯ. ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಸದಾಕಾಲ ಜನರಿಗೆ ಮುಟ್ಟಿಸುವ ಏಕೈಕ ಬಲಿಷ್ಠ ಮಾಧ್ಯಮ ರಂಗಭೂಮಿ ಎಂದು ಹಾವೇರಿ ವಿಶ್ವ ವಿದ್ಯಾಲಯದ ಆಡಳಿತ ಕುಲಸಚಿವ ಡಾ.ಎಸ್.ಟಿ. ಬಾಗಲಕೋಟಿ ನುಡಿದರು.

ಹಾವೇರಿ: ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಜನಾಂಗದಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕಲು ರಂಗಭೂಮಿಯಿಂದ ಸಾಧ್ಯ. ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಸದಾಕಾಲ ಜನರಿಗೆ ಮುಟ್ಟಿಸುವ ಏಕೈಕ ಬಲಿಷ್ಠ ಮಾಧ್ಯಮ ರಂಗಭೂಮಿ ಎಂದು ಹಾವೇರಿ ವಿಶ್ವ ವಿದ್ಯಾಲಯದ ಆಡಳಿತ ಕುಲಸಚಿವ ಡಾ.ಎಸ್.ಟಿ. ಬಾಗಲಕೋಟಿ ನುಡಿದರು. ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ, ಜಿಲ್ಲಾ ಕಲಾಬಳಗ ಹಾಗೂ ಸಾಹಿತ್ಯ ವೇದಿಕೆಯ ಐಕ್ಯೂಎಸಿ ವಿಭಾಗದಿಂದ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಒಂದು ದಿನದ ವಿಚಾರ ಸಂಕಿರಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಎಲ್.ಇ ಆಡಳಿತ ಮಂಡಳಿ ನಿರ್ದೇಶಕ ಎಂ.ಸಿ. ಕೊಳ್ಳಿ ಅಧ್ಯಕ್ಷತೆಯನ್ನು ವಹಿಸಿ, ರಂಗಭೂಮಿಯು ಸದಾಕಾಲ ಒಳ್ಳೆಯ ವಿಚಾರಗಳನ್ನು, ದೇಶಪ್ರೇಮ, ಜೀವನ ಪ್ರೀತಿ ಗಡಿಮೀರಿದ ಮೌಲ್ಯಗಳನ್ನು ಹೇಳುತ್ತ ಬಂದಿದೆ. ರಂಗಭೂಮಿ ಜೀವನ ಪಾಠಶಾಲೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ರಂಗಭೂಮಿ ಆಸಕ್ತಿ ಕಡಿಮೆಯಾಗುತ್ತಿರುವುದಕ್ಕೆ ಸಾಮಾಜಿಕ ಜಾಲ ತಾಣಗಳ ಬಳಕೆ ಕಾರಣವಾಗಿದೆ. ರಂಗ ಚಟುವಟಿಕೆಗಳು ಹೆಚ್ಚಾದರೆ, ಈ ಗೀಳನ್ನು ಕಡಿಮೆ ಮಾಡಬಹುದು ಎಂದರು. ಜಿಲ್ಲಾ ಕಲಾ ಬಳಗದ ಸಂಚಾಲಕ ಕೆ.ಆರ್. ಹಿರೇಮಠ, ಅನೇಕ ನಾಟಕದ ಹೆಸರುಗಳೇ ಕ್ರೌರ್ಯವನ್ನು ಪ್ರತಿಪಾದಿಸುವಂತಿವೆ. ಒಳ್ಳೆಯ ನಾಟಕಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಜೀವನಾದರ್ಶ ಬಿಂಬಿಸುವ ನಾಟಕಗಳು ಬೇಕು ಎಂದರು. ಈ ಸಂದರ್ಭದಲ್ಲಿ ರಂಗಭೂಮಿಗೆ ಅನನ್ಯ ಸೇವೆ ಸಲ್ಲಿಸಿದ ನಾಗರಾಜ ಬಣಕಾರ, ಶಂಕರಲಿಂಗಯ್ಯ ಬಸಲಿಂಗಯ್ಯ ಹಿರೇಮಠ, ಈರಣ್ಣ ಬೆಳವಡಿ, ಜಗದೀಶ ಚೌಟಗಿ, ಜಮೀರ ರಿತ್ತಿ, ಎ.ಬಿ. ಗುಡ್ಡಳ್ಳಿ ಅವರನ್ನು ಸನ್ಮಾನಿಸಲಾಯಿತು. ಇಂದಿನ ರಂಗಭೂಮಿ ಎಂಬ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ರಂಗಭೂಮಿ ಸುತ್ತ ಒಂದ ಅವಲೋಕನ ಎಂಬ ವಿಷಯ ಕುರಿತು ವಿಚಾರಗಳನ್ನು ಮಂಡಿಸಿದರೆ, ನಾಗವೇಣಿ ಪಾಟೀಲ ಮತ್ತು ಸಂಧ್ಯಾ ಕುಲಕರ್ಣಿ ರಂಗಭೂಮಿ ಅಂದು ಇಂದು ಮತ್ತು ಅದರ ಸವಾಲುಗಳು ಕುರಿತು ವಿಚಾರಗಳನ್ನು ಹಂಚಿಕೊಂಡರು. ಶಂಕರ ಸುತಾರ, ಐಕ್ಯೂಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ, ಸಂಚಾಲಕ ಡಾ. ಶಮಂತಕುಮಾರ ಕೆ.ಎಸ್. ಇದ್ದರು. ಪ್ರಾಚಾರ್ಯ ಎಂ.ಎಂ. ಹೊಳ್ಳಿಯವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂಜೀವ ಆರ್. ನಾಯಕ್ ಸ್ವಾಗತಿಸಿದರು. ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರೊ. ಶ್ರೀದೇವಿ ದೊಡ್ಡಮನಿ ನಡೆಸಿಕೊಟ್ಟರು.