ಕಾಲು ಮುರಿದುಕೊಂಡ ಕಳ್ಳ; ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

| Published : Jul 26 2024, 01:31 AM IST

ಸಾರಾಂಶ

ಚನ್ನಾಪುರ ಗ್ರಾಮದಲ್ಲಿ ಅಂಗಡಿಯೊಂದನ್ನು ಕಳ್ಳತನ ಮಾಡಲು ಬಂದಿದ್ದ ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಸಮೀಪದ ಚನ್ನಾಪುರ ಗ್ರಾಮದಲ್ಲಿ ಅಂಗಡಿಯೊಂದನ್ನು ಕಳ್ಳತನ ಮಾಡಲು ಬಂದಿದ್ದ ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಕಿತ್ತೂರು ಪಟ್ಟಣದ ನಿವಾಸಿ ಸಮೀವುಲ್ಲಾ ಅಬ್ದುಲ್‌ ಮುನಾಫ್‌ ಶಿಗನಳ್ಳಿ ಎಂಬುವವರಿಗೆ ಸೇರಿದ ಆಟೋ ಎಲೆಕ್ಟ್ರಿಕಲ್‌ ಗ್ಯಾರೇಜ್‌ ಹಾಗೂ ಸ್ಪೇರ್‌ ಪಾರ್ಟ್ಸ್‌ಗಳ ಅಂಗಡಿಗೆ ಕನ್ನ ಹಾಕಲು ಬಂದಿದ್ದ ಕಳ್ಳರು ಶೆಲ್ಟರ್‌ ಬೀಗ ಮುರಿಯಲು ಮುಂದಾಗಿದ್ದು, ಅದು ಸಾಧ್ಯವಾಗದೇ ಇದ್ದಾಗ ಅಂಗಡಿಯ ಮೇಲೆ ಹತ್ತಿ ಪತ್ರಾಸ್ ನಟ್ಟ ಬಿಚ್ಚಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಸಪ್ಪಳ ಕೇಳಿ ಸ್ಥಳಿಯರು ಎಚ್ಚರಗೊಂಡು ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಮೇಲ್ಬಾಗದಲ್ಲಿ ಹತ್ತಿದ್ದ ಕಳ್ಳನೋರ್ವ ಕೆಳಗೆ ಜಿಗಿದ ಪರಿಣಾಮ ಕಾಲು ಮುರಿದು ಸೆರೆ ಸಿಕ್ಕಿದ್ದಾನೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಿತ್ತೂರು ಪೊಲೀಸರು ಕಾಲುಮುರಿತಕ್ಕೆ ಒಳಗಾದ ಹಳೇ ಹುಬ್ಬಳ್ಳಿಯ ಆನಂದ ನಗರದ ಫಾರೂಕ್ ಇಸ್ಮಾಯಿಲ್ ಹುಯಿಲಗೋಳ ಎಂಬಾತನನ್ನು ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇರ್ಫಾನ್‌ ಅಬ್ದುಲ್ ಬೊದಲೇ ಖಾನ್ ಹಾಗೂ ಹಳೇ ಹುಬ್ಬಳ್ಳಿ ಕೃಷ್ಣಾಪುರ ಗಲ್ಲಿಯ ಮಹ್ಮದಹುಸೇನ್‌ ಅಬ್ದುಲ್‌ಸಾಬ್‌ ನರಗುಂದ ಎಂಬುವವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.