ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾವಿರ ಸಮಸ್ಯೆಗಳಲ್ಲಿ ಒಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ₹ 3,500 ಕೋಟಿ ಮುಡಾ ಹಗರಣ ಬೆಳಕಿಗೆ ಬಂದ ಮೇಲೆ 14 ಸೈಟ್ ವಾಪಸ್ ಪಡೆದಿರುವುದು, ಇವರ ಸಾವಿರ ದಿನಗಳ ಭ್ರಷ್ಟಾಚಾರ ಬೆಳಕಿಗೆ ಬಂದಿದೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.

ಯಕ್ಸಂಬಾದ ಬೀರೇಶ್ವರ ಸಭಾಗೃಹದಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಾಲ್ಮೀಕಿ ಹಗರಣ ₹ 178 ಕೋಟಿ ನಿಗಮದ ಹಣವನ್ನು 700 ಖಾತೆಗಳಿಗೆ ವರ್ಗಾವಣೆ ನಡೆಸಿದ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದರು. ವಕ್ಫ್ ಮಂಡಳಿಯಿಂದ ₹4 ಕೋಟಿ ಆಕ್ರಮ ಹಣ ವರ್ಗಾವಣೆ, 11 ಇಲಾಖೆ, 9 ನಿಗಮಗಳಲ್ಲಿ ₹ 42 ಕೋಟಿ ದುರುಪಯೋಗವಾಗಿದೆ ಎಂದು ದೂರಿದರು.

ಅಬಕಾರಿ ಇಲಾಖೆಯಲ್ಲಿ ₹700 ಕೋಟಿಯಷ್ಟು ಹಗರಣ ನಡೆದಿದ್ದು, ಈ ಪ್ರಕರಣದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡುವಂತೆ ಅವರು ಒತ್ತಾಯಿಸಿದರು. 15,500 ಸ್ಮಾರ್ಟ್‌ ಮೀಟರ್ ಹಗರಣ ಸಚಿವ ಕೆ.ಜೆ.ಜಾರ್ಜ್‌ ,ಹೆಸ್ಕಾಂನಲ್ಲಿ ₹90 ಕೋಟಿ ಟ್ರಾನ್ಸಫಾರ್ಮರ್‌ ಹಗರಣ, ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ ₹ 617 ಕೋಟಿ, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ರೈತರ, ಮಠಗಳ ಜಮೀನುಗಳನ್ನು ವಕ್ಫ್‌ ಬೋರ್ಡ್‌ ಆಸ್ತಿ ಎಂದು ನಮೂದಿಸಿರುವುದು. ಬೆಂಗಳೂರಿನಲ್ಲಿ ₹1261 ಕೋಟಿ ಸೈಬರ್‌ ವಂಚನೆ ಆಗಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ಜನರಿಗೆ ಎದ್ದು ಕಾಣುತ್ತಿದೆ ಎಂದರು.

ಗಗನಕ್ಕೆ ತಲುಪಿದ ಎಲ್ಲ ದಿನಸಿ ವಸ್ತುಗಳ ಬೆಲೆ, ಮಹಿಳೆಯರ ಮೇಲೆ ದೌರ್ಜನ್ಯ ಬೆಳಗಾವಿ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸ ಹಲ್ಲೆ, ಮಂಗಳೂರಿನ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ದಾಳಿ, ಗಂಗಾವತಿಯಲ್ಲಿ ವಿದೇಶಿ ಮಹಿಳೆಯರ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ ನಡೆಸಿದ್ದರು. ಹುಬ್ಬಳ್ಳಿಯಲ್ಲಿ ಮತಾಂಧನಿಂದ ಹಿಂದು ಯುವತಿ ನೇಹಾ ಹಿರೇಮಠ ಕೊಲೆ, ಕೇಶ್ವಾಪುರ ಠಾಣೆಯ ಪೊಲೀಸರು ಮಹಿಳೆಯನ್ನು ಥಳಿಸಿರುವುದು, ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ, ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಯುವ ಜನತೆಯ ಭವಿಷ್ಯಕ್ಕೆ ಸರ್ಕಾರ ಕೊಳ್ಳಿ ಇಟ್ಟಿದ್ದು, 2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಯುವಜನತೆಯ ಬದುಕಿನೊಂದಿಗೆ ಸರ್ಕಾರ ಚಲ್ಲಾಟವಾಡುತ್ತಿದೆ. ಸರ್ಕಾರಿ ಶಾಲೆಗಳು ರಿಪೇರಿ ಇಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಓದುವ ಪರಿಸ್ಥಿತಿ ಮಕ್ಕಳಿಗೆ ಬಂದೊದಗಿದೆ. ಸರ್ಕಾರ ಜಾರಿ ಮಾಡಿದ ಅವೈಜ್ಞಾನಿಕ ಭಾಗ್ಯಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಒಟ್ಟಿನಲ್ಲಿ ಹಗರಣಗಳ ಸರಮಾಲೆ, ದಲಿತರ ಹಣ ದುರ್ಬಳಿಕೆ, ದಲಿತ ವಿರೋಧಿ, ಹಿಂದೂ ವಿರೋಧಿ, ರೈತ ವಿರೋಧಿ, ಕಾಲ ಹರಣ ಮಾಡುತ್ತಿರುವ ಸರ್ಕಾರ ಇದಾಗಿದ್ದು, ಇವರ 1000 ದಿನದ ಸಾಧನೆ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆಯ ಮುಖಪುಟ, ಅನುದಾನ ಗುಳುಂ, ಹಳ್ಳ ಹಿಡಿದ ನೀರಾವರಿ ಯೋಜನೆ, ರಸ್ತೆಗಳು ಗುಂಡಿಮಯ, ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು.