ಮೂರು ದಿನಗಳ ಉತ್ಸವ; ಇನ್ನೂರಕ್ಕೂ ಹೆಚ್ಚು ಕಲಾವಿದರ ಅಪೂರ್ವ ಸಂಗಮ

| Published : Mar 02 2024, 01:49 AM IST

ಮೂರು ದಿನಗಳ ಉತ್ಸವ; ಇನ್ನೂರಕ್ಕೂ ಹೆಚ್ಚು ಕಲಾವಿದರ ಅಪೂರ್ವ ಸಂಗಮ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮಚಂದ್ರ ಮೂರ್ತಿ ವಿಷ್ಣು ಭಟ್ಲಾರ ಅಭೂತಪೂರ್ವ ಸಂಗೀತ ಕಚೇರಿ, ವಿದ್ವಾನ್ ಜಯಂತ್ ಮತ್ತು ವಿದುಷಿ ಶರ್ವಾಣಿ, ಅವರ ಗಾಯನ, ಮತ್ತು ಹಿರಿಯ ಸಂಗೀತ ವಿದುಷಿಯರಾದ ವಿನಯ ರಾವ್ ಮತ್ತು ಅವರ ಸಂಗಡಿಗರು, ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜಸ್ವಾಮಿಯವರ ಕೃತಿ ಮತ್ತು ದೇವರನಾಮಗಳ ಗಾಯನವನ್ನು, ಸುಮಾರು ನಾಲ್ಕು ಗಂಟೆಗಳಿಗಿಂತ ಹೆಚ್ಚಾಗಿ ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ ಕುಮಾರ್‌ ಪ್ರದರ್ಶಕ ಕಲೆಗಳ ಕೇಂದ್ರದಿಂದ ನಡೆದ ಮೂರು ದಿನಗಳ ಕಲಾ ಉತ್ಸವದಲ್ಲಿ ಇನ್ನೂರಕ್ಕೂ ಹೆಚ್ಚು ಕಲಾವಿದರ ಅಪೂರ್ವ ಸಂಗಮ ಮೇಳೈಸಿತ್ತು.

33, 34 ಮತ್ತು 35ನೇ ಶ್ರೀ ಪುರಂದರ ತ್ಯಾಗರಾಜ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ ಹಾಗೂ ಪದ್ಮಭೂಷಣ ರುಕ್ಕುಣಿ ದೇವಿ ಅರುಂಡೇಲ್ ಅವರ 120ನೇ ಜನ್ಮದಿನದ ಪ್ರಯುಕ್ತ ಅಂತಾರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ ನಡೆಸಲಾಯಿತು.

ಪ್ರತಿ ದಿನ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗಿ ಸಂಜೆ 6.30 ರವರೆಗೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸಂಗೀತ ಹಾಗೂ ನೃತ್ಯ ಕಲಾವಿದರು ವೈವಿಧ್ಯಮಯವಾದ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಮೊದಲ ದಿನ ನಾಡಿನ ಹಿರಿಯ ಶ್ರೇಷ್ಠ ವಿದ್ವಾಂಸರಾದ ವಿದ್ವಾನ್ ವಿ.ನಂಜುಂಡಸ್ವಾಮಿ, ಡಾ.ಸಿ.ಎ.ಶ್ರೀಧರ್, ವಿದ್ವಾನ್ ಪ್ರಭಂಜನಾಚಾರ್ಯ, ವಿದ್ವಾನ್ ಶ್ರೀರಾಮಚಂದ್ರ ಮೂರ್ತಿ ವಿಷ್ಣು ಭಟ್ಲಾ, ಮತ್ತು ಅವರ 40ಕ್ಕಿಂತ ಹೆಚ್ಚು ಶಿಷ್ಯರು, ವಿದ್ವಾನ್ ಶರತ್ ರಾವ್, ವಿದ್ವಾನ್ ಜಿ ಟಿ ಸ್ವಾಮಿ ಮತ್ತು ಇವರ ಶಿಷ್ಯ ವೃಂದ, ವಿದ್ವಾನ್ ಯಶಸ್ವಿ, ಹಿಂದುಸ್ತಾನಿ ಗಾಯಕರಾದ ಡಾ. ಮಾಣಿಕ್ ಬೆಂಗೇರಿ, ಉಮಾದೇವಿ ನಂಜುಂಡಸ್ವಾಮಿ, ವಿದುಷಿ ಗಾಯತ್ರಿ ಮೊದಲಾದವರು ರು ಸಂತ ಶ್ರೀ ಪುರಂದರದಾಸ ಮತ್ತು ತ್ಯಾಗರಾಜರ ಗೋಷ್ಠಿ ಗಾಯನ ನಡೆಸಿಕೊಟ್ಟರು.

ಶ್ರೀರಾಮಚಂದ್ರ ಮೂರ್ತಿ ವಿಷ್ಣು ಭಟ್ಲಾರ ಅಭೂತಪೂರ್ವ ಸಂಗೀತ ಕಚೇರಿ, ವಿದ್ವಾನ್ ಜಯಂತ್ ಮತ್ತು ವಿದುಷಿ ಶರ್ವಾಣಿ, ಅವರ ಗಾಯನ, ಮತ್ತು ಹಿರಿಯ ಸಂಗೀತ ವಿದುಷಿಯರಾದ ವಿನಯ ರಾವ್ ಮತ್ತು ಅವರ ಸಂಗಡಿಗರು, ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜಸ್ವಾಮಿಯವರ ಕೃತಿ ಮತ್ತು ದೇವರನಾಮಗಳ ಗಾಯನವನ್ನು, ಸುಮಾರು ನಾಲ್ಕು ಗಂಟೆಗಳಿಗಿಂತ ಹೆಚ್ಚಾಗಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು, ಮತ್ತು ಎಲ್ಲಾ ಕಲಾವಿದರ ಗಾಯನಕ್ಕೆ ಮತ್ತು ಪಕ್ಕ ವಾದ್ಯಗಳ ಸಹಕಾರಕ್ಕೆ ಉತ್ತಮವಾದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಕೇಂದ್ರದ ಕಾರ್ಯದರ್ಶಿ ಡಾ.ಕೆ. ಕುಮಾರ್‌ ಅವರು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದರು.

ಎರಡನೇ ದಿನದ ಕಾರ್ಯಕ್ರಮದಲ್ಲಿ ಸುಮಾರು 80ಕ್ಕಿಂತ ಹೆಚ್ಚು ನೃತ್ಯ ಕಲಾವಿದರು ಹಾಗೂ ಆರು ಪ್ರಮುಖ ನೃತ್ಯ ಗುರುಗಳು ಆಗಮಿಸಿ ಎಲ್ಲರ ಮನಸ್ಸನ್ನು ಸೂರೆಗೊಂಡ ನೃತ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳಿಂದ ಜಗದಾನಂದ ಕಾರಕ ಪಂಚರತ್ನ ಕೃತಿಯನ್ನು ನಂತರ ವಿದುಷಿಯರಾದ ಸುನೀತಾ ಸುಕುಮಾರನ್, ಅನುಪಮಾ, ಆಶಾ ಕುಮಾರ್, ಸೂರ್ಯ ಗಾಯತ್ರಿ ದೇವಿ, ಆರತಿ ಅರುಣ್, ವೀಣಾ ಸಾಮಗ ಇವರ ವಿದ್ಯಾರ್ಥಿಗಳಿಂದ ಶ್ರೀ ಪುರಂದರದಾಸರ ಹಾಗೂ ತ್ಯಾಗರಾಜ ಸ್ವಾಮಿಯವರ ದೇವರ ನಾಮ ಮತ್ತು ಕೃತಿಗಳಿಗೆ ಭರತನಾಟ್ಯ ನೃತ್ಯ, ಮತ್ತು ಪುರಂದರ ದಾಸರ ನೃತ್ಯರೂಪಕವನ್ನು ಮನೋಜ್ಞವಾದ ಭಾವಾಭಿನಯಗಳೊಂದಿಗೆ ನರ್ತಿಸಿ ಪ್ರೇಕ್ಷಕರ ಮನಸೂರೆ ಗೊಂಡರು.

ಮೂರನೇ ದಿನ ರುಕ್ಮಿಣಿ ದೇವಿ ಅರುಂಡೇಲ್ ಅವರ 120 ನೇ ಜಯಂತಿಯ ಪ್ರಯುಕ್ತ ಅವರ ಸ್ಮರಣಾರ್ಥದ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುಮಾರು 40ಕ್ಕಿಂತ ಹೆಚ್ಚು ನೃತ್ಯ ಕಲಾವಿದರು ಐದು ಪ್ರಮುಖ ನೃತ್ಯ ಗುರುಗಳು ನೃತ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ನೆರೆದಿದ್ದ ಸಭಿಕರ ಮನ ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾದರು. ಮಂಡ್ಯದ ವಿದುಷಿ ಕೆ.ಎಸ್.ಶೈಲಾ, ಸುನೀತಾ ನಂದಕುಮಾರ್, ಮೈಸೂರಿನವರೇ ಆದ ಡಾ.ಸ್ಪರ್ಶ ಶೆಣೈ, ಶಿಲ್ಪಾ ಅಭಿರಾಮ್, ಸ್ಮೃತಿ ರಮೇಶ್ ಕೌಶಿಕ್, ಮತ್ತು ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.