ಮೂರು ಬಾರಿ ಶಾಸಕರಾಗಿ, ಬಾಡಿಗೆ ಮನೇಲಿದ್ದ ಶಾಗೋಗೌ

| Published : Mar 18 2024, 01:45 AM IST

ಸಾರಾಂಶ

ಜೀವನದಲ್ಲಿ ತಾವು ನಂಬಿದ ತಾತ್ವಿಕ ನೆಲೆಯಲ್ಲಿ ಬದುಕಿ, ಅಹಿಂಸಾತ್ಮಕ ಹೋರಾಟದ ಮೂಲಕ ಸಮಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರು. ಅವರ ಬದುಕು ಮತ್ತು ಆದರ್ಶ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ, ಲೇಖಕ ಡಾ.ಬಿ.ಗಣಪತಿ ತೀರ್ಥಹಳ್ಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಜೀವನದಲ್ಲಿ ತಾವು ನಂಬಿದ ತಾತ್ವಿಕ ನೆಲೆಯಲ್ಲಿ ಬದುಕಿ, ಅಹಿಂಸಾತ್ಮಕ ಹೋರಾಟದ ಮೂಲಕ ಸಮಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರು. ಅವರ ಬದುಕು ಮತ್ತು ಆದರ್ಶ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ, ಲೇಖಕ ಡಾ.ಬಿ.ಗಣಪತಿ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಗೂ ಕರ್ನಾಟಕ ಜನಪದ ಪರಿಷತ್ತಿನ ವತಿಯಿಂದ ನಡೆದ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಅಂಗವಾಗಿ "ಗೋಪಾಲಗೌಡರ ಬದುಕು ಮತ್ತು ಹೋರಾಟ " ಕುರಿತು ಅವರು ಮಾತನಾಡಿದರು.

ಗೇಣಿದಾರರ ಪರ ಹೋರಾಟ ನಡೆಸಿ, ಸಮಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಹೊಂದಿದ್ದ ಗೋಪಾಲಗೌಡರು ಮೂರು ಬಾರಿ ಶಾಸಕರಾಗಿದ್ದರೂ ಕೊನೆಯವರೆಗೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದರು. ರಾಜಕಾರಣಿಗಳಿಗೆ ಆದರ್ಶರಾಗಿದ್ದ ಅವರು ಜನ್ಮ ತಾಳಿದ ಶಾಂತವೇರಿಯಿಂದ ಕೇವಲ ದೀಪ ಒಯ್ಯಲು ಹಾಗೂ ಈ ಪವಿತ್ರ ಭೂಮಿಯ ಮಣ್ಣು ಕೊಂಡು ಹೋಗಲು ಮೀಸಲಾಗಿರುವುದು ವಿಷಾದನೀಯ ಎಂದು ಮಾರ್ಮಿಕವಾಗಿ ನುಡಿದರು.

ವಿದ್ಯಾರ್ಥಿ ಜೀವನದಲ್ಲಿಯೇ ಜೈಲುವಾಸ ಅನುಭವಿಸಿದ ಶಾಂತವೇರಿ ಅವರು 1952ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಚುನಾಯಿತರಾದ ಮೊದಲ ಅವಧಿಯಲ್ಲಿಯೇ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ನಾಗರಿಕ ಸರ್ಕಾರದ ಹೊಣೆಗಾರಿಕೆಯಾಗಿದೆ. ಜೊತೆಗೆ ಮಕ್ಕಳು ಹಸಿದಿರದಂತೆ ಮಧ್ಯಾಹ್ನದ ಊಟವನ್ನೂ ನೀಡುವಂತೆ ಆಗ್ರಹಿಸಿದ್ದರು ಎಂದರು.

ಪುರಸಭೆ ಮಾಜಿ ಸದಸ್ಯ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್‌ ಸಮಾರಂಭ ಉದ್ಘಾಟಿಸಿ, ಗೋಪಾಲಗೌಡರು ರಾಜಕಾರಣಿ ಮಾತ್ರವಲ್ಲದೇ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿಯೂ ಆಳವಾದ ಜ್ಞಾನ ಹೊಂದಿದ್ದರು. ಅಪರೂಪಕ್ಕೆ ಜನ್ಮ ತಾಳುವ ಇಂಥ ವ್ಯಕ್ತಿಗಳು ಎಂದಿಗೂ ಅಮರರಾಗಿದ್ದಾರೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಪ.ಪಂ. ಅಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸುಶೀಲಾ ಶೆಟ್ಟಿ, ಗುತ್ತಿಗೆದಾರ ಡಿ.ಎಸ್. ಅಬ್ದುಲ್ ರಹಮಾನ್, ರೇಣುಕಾ ಹೆಗ್ಡೆ, ಮಹಮದ್, ಪ್ರಸನ್ನ ತಿರಳೇಬೈಲು ಇದ್ದರು.

- - - -18ಟಿಟಿಎಚ್01:

ಸಮಾರಂಭವನ್ನು ಪುರಸಭೆ ಮಾಜಿ ಸದಸ್ಯ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್‌ ಉದ್ಘಾಟಿಸಿದರು.