ಕಾರ್ಯಕರ್ತರ ಆಯ್ಕೆ ಅಭ್ಯರ್ಥಿಗೆ ಟಿಕೆಟ್ ಕೊಡಬೇಕಿತ್ತು: ಶಾಸಕ ಗೋಪಾಲಕೃಷ್ಣ ಬೇಳೂರು

| Published : Jun 11 2024, 01:30 AM IST

ಕಾರ್ಯಕರ್ತರ ಆಯ್ಕೆ ಅಭ್ಯರ್ಥಿಗೆ ಟಿಕೆಟ್ ಕೊಡಬೇಕಿತ್ತು: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮುಂದಿನ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲ್ಲಿಸಿಕೊಂಡು ಬರುವ ಶಕ್ತಿ ಬೇಳೂರಿಗೆ ಇದೆ. ಅದನ್ನು ತಡೆಯುವ ತಾಕತ್ತು ಯಾರಿಗಾದರೂ ಇದ್ದರೆ ತಡೆಯಲಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹಾಲಪ್ಪ ಹೇಳುತ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳ ಗಲಾಟೆ ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಕನ್ನಡಪ್ರಭವಾರ್ತೆ ಸಾಗರ

ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿಗೆ ೨೬ಸಾವಿರ ಮತಗಳ ಮುನ್ನಡೆ ದೊರಕಿದೆಯೆಂದು ಕಾರ್ಯಕರ್ತರು ಹೆದರಬೇಡಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರು ಬಿಜೆಪಿಗೆ ಮತ ನೀಡಿದ್ದಾರೆ ಹೊರತು ಬಿ.ವೈ.ರಾಘವೇಂದ್ರ ಹಾಗೂ ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಮಾತನಾಡಿ, ಪಕ್ಷದ ಜೊತೆ ಸದಾ ಇರುವ, ಕಾರ್ಯಕರ್ತರು ಆಯ್ಕೆ ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹೈಕಮಾಂಡ್ ಟಿಕೆಟ್ ನೀಡಿದ ಅಭ್ಯರ್ಥಿ ಪರವಾಗಿ ನಾವೆಲ್ಲಾ ಕೆಲಸ ಮಾಡಿದ್ದೇವೆ. ಆದರೂ ಸೋಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮುಂದಿನ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲ್ಲಿಸಿಕೊಂಡು ಬರುವ ಶಕ್ತಿ ಬೇಳೂರಿಗೆ ಇದೆ. ಅದನ್ನು ತಡೆಯುವ ತಾಕತ್ತು ಯಾರಿಗಾದರೂ ಇದ್ದರೆ ತಡೆಯಲಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹಾಲಪ್ಪ ಹೇಳುತ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳ ಗಲಾಟೆ ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಲಪ್ಪನವರ ರೀತಿ ಅಮಾಯಕರ ಮೇಲೆ ಹಲ್ಲೆ ಮಾಡಿಸುವಷ್ಟು ಕಾನೂನು ಹದಗೆಟ್ಟಿಲ್ಲ ಎಂದು ಟಾಂಗ್ ನೀಡಿದರು.

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಅವಶ್ಯ:

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟೆ ಕಷ್ಟಪಟ್ಟರೂ ಅಭ್ಯರ್ಥಿ ಪರವಾಗಿ ಹೆಚ್ಚುಮತ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು ಬಯಸಿ ಅಭ್ಯರ್ಥಿ ಆಯ್ಕೆ ಮಾಡಿದ್ದರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ನೀಡಿದ್ದು ಸೋಲಿಗೆ ಕಾರಣವಾಗಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿದ್ದಲ್ಲಿ ಪಕ್ಷ ಜೀವಂತವಾಗಿರಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕಾರ್ಯಕರ್ತರ ಮಾತಿಗೆ ಮನ್ನಣೆ ಕೊಡುವಂತೆ ಆಗಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಐ.ಎನ್.ಸುರೇಶಬಾಬು, ಅಶೋಕ್ ಬೇಳೂರು, ರವಿಕುಮಾರ್ ಎಚ್.ಎಂ., ಕೆ.ಹೊಳೆಯಪ್ಪ, ಬಿ.ಎ.ಇಂದೂಧರ ಗೌಡ, ಪ್ರಭಾವತಿ ಚಂದ್ರಕಾಂತ್, ಮಕ್ಬೂಲ್ ಅಹ್ಮದ್, ಚಂದ್ರಮೌಳಿ, ಉಷಾ ಎನ್. ಇನ್ನಿತರರು ಹಾಜರಿದ್ದರು. ಚೇತನರಾಜ್ ಕಣ್ಣೂರು ಸ್ವಾಗತಿಸಿದರು. ಮೈಕಲ್ ಡಿಸೋಜಾ ನಿರೂಪಿಸಿದರು.

ಕೇಂದ್ರದ ಸರ್ಕಾರವೇ ಸ್ಥಿರವಿಲ್ಲ

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದರು. ಇದೀಗ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಸ್ಥಿರವಿಲ್ಲ. ಸ್ವತಃ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಶಿಕಾರಿಪುರ ಕ್ಷೇತ್ರದಲ್ಲಿ ಮತಕ್ಕೆ ೨ಸಾವಿರ ರು. ಕೊಟ್ಟರೂ ಬಿ.ವೈ.ರಾಘವೇಂದ್ರ ಕಡಿಮೆ ಅಂತರದಲ್ಲಿ ಗೆಲ್ಲಲು ಕಾರಣ ಏನೆಂದು ಸ್ಪಷ್ಟಪಡಿಸಲಿ. ಒಂದು ವರ್ಷ ಮೊದಲು ಇಂಡಿಯಾ ಒಕ್ಕೂಟ ರಚನೆಯಾಗಿದ್ದರೆ ದೇಶದಲ್ಲಿ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು. ಇದೀಗ ದೇಶದಲ್ಲಿ ಮೋದಿಯವರ ಜನಪ್ರಿಯತೆ ಕಡಿಮೆಯಾಗಿದೆ.

ಗೋಪಾಲಕೃಷ್ಣ ಬೇಳೂರು, ಶಾಸಕ

ಕೆಲವರಿಂದ ಸಚಿವ ಮಧು ರಾಜೀನಾಮೆಗೆ ಒತ್ತಾಯ

ಕೆಲವು ಕಾರ್ಯಕರ್ತರು ಸೋಲಿನ ನೈತಿಕ ಹೊಣೆಹೊತ್ತು ಸಚಿವ ಮಧು ಬಂಗಾರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರೆ, ಇನ್ನು ಕೆಲವರು ಬಂಗಾರಪ್ಪ ಅವರ ಕುಟುಂಬದ ವೈಯಕ್ತಿಕ ಜಗಳ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಅಭಿಪ್ರಾಯಪಟ್ಟರು. ಇನ್ನಷ್ಟು ಕಾರ್ಯಕರ್ತರು ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಮನವಿ ಮಾಡಿದರು.