ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆರ್ ಎಸ್ ಎಸ್ ನ ಕಟ್ಟಾಳು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.ಈ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಅಭಿಯಾನ ಆರಂಭಿಸಿದ್ದು ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದ ಬಿಜೆಪಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿತ್ತು. ಈ ನಡುವೆ ಬಿಜೆಪಿಯಲ್ಲಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮಂಗಳವಾರ ಉಡುಪಿ ಚಿಕ್ಕಮಗಳೂರಿಗೆ ಟಿಕೆಟ್ ದೊರೆಯುವ ಭರವಸೆಯೊಂದಿಗೆ ಕಾಂಗ್ರೆಸ್ ಸೇರಿದ್ದರಿಂದ, ಬಿಜೆಪಿಯಲ್ಲಿ ರಾತ್ರೋರಾತ್ರಿ ಈ ಕ್ಷೇತ್ರದಲ್ಲಿ ಜಾತೀವಾರು ಮತಗಳ ಪ್ರಾಬಲ್ಯ ಎಣಕೆ ಆರಂಭವಾಯಿತು. ಈ ಕ್ಷೇತ್ರದಲ್ಲಿ ಪ್ರಬಲರಾಗಿರುವ ಬಂಟ ಸಮುದಾಯದ ಹೆಗ್ಡೆ ಅವರ ವಿರುದ್ಧ ಇನ್ನೊಂದು ಪ್ರಬಲ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತು. ಕೋಟ ಪೂಜಾರಿ ಅವರು ರಾಜ್ಯದ ಬಿಜೆಪಿಯ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿರುವುದು ಕೂಡ ಅವರಿಗೆ ಪಕ್ಷದ ವರಿಷ್ಠರಲ್ಲಿ ಯಾರ ವಿರೋಧವೂ ಇಲ್ಲದೇ ಟಿಕೇಟು ಒಲಿದಿದೆ. ಜೊತೆಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಇಲ್ಲದಿದ್ದರೆ ತಮಗೆ ಟಿಕೆಟ್ ನೀಡಬೇಕು ಎಂದು ಪ್ರಮೋದ್ ಮಧ್ವರಾಜ್ ಲಾಬಿ ನಡೆಸಿದ್ದರು. ಆದರೆ ಶೋಭಾ ಅವರಿಗೆ ಪಕ್ಷದ ಕಾರ್ಯಕರ್ತರ ವಿರೋಧ ಇದ್ದಂತೆ, ಕಾಂಗ್ರೆಸ್ ನಿಂದ ಬಂದಿರುವ ಪ್ರಮೋದ್ ಮಧ್ವರಾಜ್ ಅವರಿಗೆ ಸ್ಥಳೀಯ ಬಿಜೆಪಿ ನಾಯಕರಿಂದಲೇ ಒಲವು ಇದ್ದಿರಲಿಲ್ಲ. ಪಂಚಾಯತ್ ಜನಪ್ರತಿನಿಧಿಗಳಿಂದ ವಿಧಾನ ಪರಿಷತ್ ಗೆ ಆರಿಸಲ್ಪಟ್ಟಿರುವ ಕೋಟ ಅವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಎರಡೂ ಕಡೆಗಳಲ್ಲಿ ಪಕ್ಷದಲ್ಲಿ ಅಜಾತಶತ್ರು ಮತ್ತು ಕ್ಲೀನ್ ಇಮೇಜ್ ಇರುವುದು ಕೂಡ ಸುಲಭವಾಗಿ ಅವರು ಟಿಕೆಟ್ ಗೆ ಅರ್ಹರಾಗಿದ್ದಾರೆ.ಪಂಚಾಯತ್ ನಿಂದ ಪರಿಷತ್ ವರೆಗೆ: 65ರ ಕೋಟಾ ಅವರು 1993ರಲ್ಲಿ ಗ್ರಾಪಂ ಸದಸ್ಯರಾಗಿ ಸಕ್ರಿಯ ರಾಜಕೀಯ ಜೀವನಕ್ಕೆ ಕಾಲಿಟ್ಟರು. 96ರಲ್ಲಿ ತಾಪಂ, 2006ರಲ್ಲಿ ಜಿಪಂ ಸದಸ್ಯರಾದರು. ಬಿಜೆಪಿಯ ಜಿಲ್ಲಾಧ್ಯಕ್ಷರೂ ಆಗಿದ್ದರು. 2008ರಲ್ಲಿ ಉಡುಪಿ - ದಕ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯಾಗಿ ವಿಧಾನ ಪರಿಷತ್ ಪ್ರವೇಶಿಸಿದರು. ನಂತರ 3 ಸತತ ಬಾರಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. 2018 - 19ಲ್ಲಿ ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿದ್ದರು. 2009 - 21ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಮುಜರಾಯಿ, ಬಂದರು, ಒಳನಾಡು ಸಾರಿಗೆ ಸಚಿವರಾದರು. 2021ರ - 23ರವರೆಗೆ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ದಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದಾರೆ.
ಮತ್ತೆ ಹೆಗ್ಡೆ- ಕೋಟ ಮುಖಾಮುಖಿ: ಹಿಂದೆ 2015 ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಸಂಭ್ಯಾವ್ಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮುಖಾಮುಖಿ ಆಗಿದ್ದರು. ಕಾಂಗ್ರೆಸ್‌ನಿಂದ ಹೆಗ್ಡೆ ಅವರಿಗೆ ಟಿಕೆಟ್ ಗ್ಯಾರಂಟಿ ಆದಲ್ಲಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಅದೇ ಮುಖಾಮುಖಿ ಮತ್ತೆ ಆಗಲಿದೆ.