ಯಾವ ಮನೆಯಲ್ಲಿ ಅತಿ ಹೆಚ್ಚು ಗೋವುಗಳಿರುತ್ತವೆಯೋ ಆತನೇ ದೊಡ್ಡ ಶ್ರೀಮಂತ ಎನ್ನುವ ಕಾಲವಿತ್ತು. ಇನ್ನುಮುಂದೆ ಕೂಡ ವಿಶ್ವದಲ್ಲಿ ಐಟಿ ದಿಗ್ಗಜರು ರೈತನ ಮನೆ ಬಾಗಿಲಿಗೆ ಹೋಗಿ ಆಹಾರಕ್ಕಾಗಿ ಭಿಕ್ಷೆ ಬೇಡುವ ಕಾಲ ಬರಲಿದೆ ಎಂದು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯಾವ ಮನೆಯಲ್ಲಿ ಅತಿ ಹೆಚ್ಚು ಗೋವುಗಳಿರುತ್ತವೆಯೋ ಆತನೇ ದೊಡ್ಡ ಶ್ರೀಮಂತ ಎನ್ನುವ ಕಾಲವಿತ್ತು. ಇನ್ನುಮುಂದೆ ಕೂಡ ವಿಶ್ವದಲ್ಲಿ ಐಟಿ ದಿಗ್ಗಜರು ರೈತನ ಮನೆ ಬಾಗಿಲಿಗೆ ಹೋಗಿ ಆಹಾರಕ್ಕಾಗಿ ಭಿಕ್ಷೆ ಬೇಡುವ ಕಾಲ ಬರಲಿದೆ ಎಂದು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಗುರುವಾರ ಗೋವರ್ಧನ ಶಿವಮೊಗ್ಗದ ಒಂದು ವರ್ಷದ ಸಾರ್ಥಕ ಗೋ ಸೇವೆ ಪಯಣದ ಅಂಗವಾಗಿ ಹಮ್ಮಿಕೊಂಡಿದ್ದ ಗೋಸೇವಾ ಸಂಭ್ರಮ-2026 ಅಂಗವಾಗಿ ಉಪನ್ಯಾಸ, ಸಂವಾದ, ಗೋವಿನ ವಿವಿಧ ತಳಿಗಳ ಪ್ರದರ್ಶನ, ಗೋ ಉತ್ಪನ್ನ ಮಾರಾಟ ಮಳಿಗೆ, ಪ್ರದರ್ಶಿನಿ, ಅಶ್ವ ಶಕ್ತಿ ಗೊಬ್ಬರ ಹಾಗೂ ಸಾವಯವ ಗೊಬ್ಬರ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀಕೃಷ್ಣನ ಕಾಲದಲ್ಲಿ ಹಾಲು ಮಾರಾಟಕ್ಕೆ ಪ್ರತಿಬಂಧವಿತ್ತು. ಗೋವಿನ ಹಾಲು ಮಕ್ಕಳು ಮತ್ತು ಕರುವಿಗೆ ಮಾತ್ರ ಮತ್ತು ಕುಡಿಯಲು ಮಾತ್ರ ಬಳಕೆಯಾಗಿತ್ತು. ಮಿಕ್ಕ ಹಾಲಿನಲ್ಲಿ ತುಪ್ಪ ಮಾಡಿ ಮಾರಾಟ ಮಾಡಲು ಅವಕಾಶವಿತ್ತು. ಆಗಿನ ಕಾಲದಲ್ಲೇ ಮಥುರಾದಿಂದ ಬಲೂಚಿಸ್ಥಾನ ಹಾಗೂ ವಿವಿಧ ದೇಶಗಳಿಗೆ ತುಪ್ಪವನ್ನು ರಫ್ತು ಮಾಡುವ ದೊಡ್ಡ ಉದ್ಯಮವಿತ್ತು ಎಂದರು.ಹಿಂದೆ ಹಸು ಇದ್ದ ಮನೆಗೆ ಹೆಣ್ಣನ್ನು ಕೊಡುತ್ತಿದ್ದರು. ಈಗ ಐಷಾರಾಮಿ ಜೀವನಕ್ಕೆ ಮಾರು ಹೋಗಿ ಹಸು ಇದ್ದ ಮನೆಗೆ ಪೋಷಕರು ಹೆಣ್ಣನ್ನು ಕೊಡುವುದಿಲ್ಲ. ಈ ದೇಶದಲ್ಲಿ ಶೇ. 42 ಜನರಿಗೆ ಕೃಷಿ ಮತ್ತು ಹೈನುಗಾರಿಕೆ ಉದ್ಯೋಗ ನೀಡಿದೆ. ಇದನ್ನು ಯಾವುದೇ ಕೈಗಾರಿಕೆ ಕೊಡಲು ಸಾಧ್ಯವಿಲ್ಲ. ಪ್ರತಿನಿತ್ಯ ದೇಶಕ್ಕೆ 70 ಕೋಟಿ ಲೀಟರ್ ಹಾಲು ಬೇಕು. ಆದರೆ, 16 ಕೋಟಿ ಲೀಟರ್ ಮಾತ್ರ ಹಾಲು ಉತ್ಪಾದನೆಯಾಗುತ್ತಿದ್ದು, ಉಳಿದ ಹಾಲೆಲ್ಲ ಸುಮಾರು 22 ರಾಸಾಯನಿಕಗಳನ್ನು ಬೆರೆಸಿದ ನಕಲಿ ಹಾಲಾಗಿದೆ. ಹಬ್ಬ ಹರಿದಿನಗಳಲ್ಲಿ ಟನ್‌ಗಟ್ಟಲೇ ಮಿಠಾಯಿಗಳು ತಯಾರು ಮಾಡುವುದು ಕೂಡ ಈ ನಕಲಿ ಹಾಲಿನಲ್ಲೇ. ಪನ್ನೀರ್ ಕೂಡ ಇದರಲ್ಲೇ ತಯಾರಾಗುವುದು ಎಂದರು.
ರಾಮಚಂದ್ರಾಪುರ ಮಠದ ಕೃಷ್ಣ ಪ್ರಸಾದ್ ಮಾತನಾಡಿ, ಗೋ ಸಂರಕ್ಷಣೆ ಸವಾಲಿನ ಕೆಲಸವಾಗಿದ್ದು, ಈಗ ಗೋ ನಾಶದ ಪ್ರಕ್ರಿಯೆ ಪರಾಕಷ್ಠೆಗೆ ತಲುಪಿದ ಸಂದರ್ಭದಲ್ಲಿ ಗೋವರ್ಧನ ಟ್ರಸ್ಟ್ ನಗರದಲ್ಲಿ ಕಳೆದ ಒಂದು ವರ್ಷದಿಂದ ಗೋವಿನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದರು.ಗೋವರ್ಧನ ಟ್ರಸ್ಟ್‌ನ ಅಧ್ಯಕ್ಷ ಕೆ.ಇ. ಕಾಂತೇಶ್ ಮಾತನಾಡಿ, ಗೋವಿನ ಸೇವೆ, ಬಡ ವಿದ್ಯಾರ್ಥಿಗಳಿಗೆ ನೆರವು, ಸಾವಯವ ಕೃಷಿಗೆ ಒತ್ತು ಇವೆಲ್ಲವೂ ಪ್ರಮುಖ ವಿಷಯಗಳಾಗಿದ್ದು, ಗೋವರ್ಧನ ಟ್ರಸ್ಟ್ ಸ್ಥಾಪಿಸಿದ ಒಂದೇ ವರ್ಷದಲ್ಲಿ ಮೊದಲು ಗೋಸಂರಕ್ಷಣೆಗೆ ಆಂಬುಲೆನ್ಸ್, ನಂತರ ನಾಲ್ಕು ಗೋಶಾಲೆಗಳಿಗೆ ಮೇವಿನ ಉತ್ಪಾದನೆ, ಬಳಿಕ ವಿಶ್ವಬಂಧು ಗೋಶಾಲೆ ನಿರ್ಮಾಣ, ಈಗ ಗೋ ಉತ್ಪನ್ನಗಳು ಮತ್ತು ಸಾವಯವ ಕೃಷಿಗೆ ಆದ್ಯತೆ ಈ ಮೂಲಕ ಸೇವೆ ಮುಂದುವರೆಸುತ್ತಾ ಬಂದಿದ್ದು, ಗೋ ಜಾಗೃತಿಯನ್ನು ಮೂಡಿಸುತ್ತಾ ನಗರದ 5 ಸಾವಿರ ಗೋ ಪ್ರೇಮಿಗಳನ್ನು ಒಗ್ಗೂಡಿಸಿ ವಿವಿಧ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ನಿನ್ನೆಯಷ್ಟೇ ಅಶಕ್ತ ಗೋವುಗಳ ಆರೈಕೆ ಕೇಂದ್ರ ಗೋ ಸಂಜೀವಿನಿ ಧಾಮ ಕೂಡ ಉದ್ಘಾಟನೆಯಾಗಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಇದು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾವಯವ ಕೃಷಿಕರನ್ನು ಮತ್ತು ಗೋಸೇವಕರನ್ನು, ನಗರದ ೪ ಗೋಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಮಾಜಿ ಉಪಮುಖ್ಯಮಂತ್ರಿ ಹಾಗೂ ಗೋವರ್ಧನ ಟ್ರಸ್ಟ್ ಮಹಾಪೋಷಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೋವರ್ಧನ ಟ್ರಸ್ಟ್ ಪ್ರಮುಖರಾದ ಉಮೇಶ್ ಆರಾಧ್ಯ, ನಾಗೇಶ್ ಎಂ., ರಮೇಶ್ ಬಾಬು, ಎಸ್.ಕೆ. ಶೇಷಾಚಲ, ಗುರುಶೇಠ್, ಜಯಸ್ವಾಮಿ, ರಂಗನಾಥ್, ಗುರುಗುಹ ನಾಗರಾಜ್, ರುದ್ರಾರಾಧ್ಯ, ವಿನೋದ್ ಕುಮಾರ್ ಜೈನ್, ಇ. ವಿಶ್ವಾಸ್, ಉಮಾ ಮೂರ್ತಿ, ಸೀತಾರಾಮ್, ಶ್ರೀಕಾಂತ್, ಇತರರು ಇದ್ದರು.