ಒಂದೂವರೆ ಶತಮಾನದ ಶಾಲೆಗೆ ಅಭಿವೃದ್ಧಿಯ ಸ್ಪರ್ಶ!

| Published : Jan 18 2024, 02:01 AM IST

ಸಾರಾಂಶ

ಒಂದೂವರೆ ಶತಮಾನದ ಶಾಲೆಗೆ ಈಗ ಅಭಿವೃದ್ಧಿಯ ಸ್ಪರ್ಶ ಸಿಗುತ್ತಿದೆ. ಶಾಲೆ ಹೈಟೆಕ್ ಮಾಡುವ ಕನಸಿಗೆ ದಾನಿಗಳು ಕೈ ಜೋಡಿಸಿದ್ದು, ಕ್ಯೂಆರ್‌ಕೋಡ್ ಮೂಲಕ ದಾನ ಪಡೆಯುತ್ತಿರುವುದು ರಾಜ್ಯದಲ್ಲಿಯೇ ಇದು ಮೊದಲು ಮತ್ತು ವಿಶೇಷವಾಗಿದೆ.

ಹೈಟೆಕ್ ಮಾಡುವ ಕನಸಿಗೆ ಕೈಜೋಡಿಸಿದ ದಾನಿಗಳು । ಕ್ಯೂಆರ್‌ಕೋಡ್ ಮೂಲಕ ದಾನ ಸಂಗ್ರಹ

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಒಂದೂವರೆ ಶತಮಾನದ ಶಾಲೆಗೆ ಈಗ ಅಭಿವೃದ್ಧಿಯ ಸ್ಪರ್ಶ ಸಿಗುತ್ತಿದೆ. ಶಾಲೆ ಹೈಟೆಕ್ ಮಾಡುವ ಕನಸಿಗೆ ದಾನಿಗಳು ಕೈ ಜೋಡಿಸಿದ್ದು, ಕ್ಯೂಆರ್‌ಕೋಡ್ ಮೂಲಕ ದಾನ ಪಡೆಯುತ್ತಿರುವುದು ರಾಜ್ಯದಲ್ಲಿಯೇ ಇದು ಮೊದಲು ಮತ್ತು ವಿಶೇಷವಾಗಿದೆ.

ಇಲ್ಲಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಶಾಲೆ ನೂರೆಂಬತ್ತು ವರ್ಷಗಳ ಇತಿಹಾಸ ಹೊಂದಿದೆ. ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಲಿಂ. ಸದಾಶಿವ ಮಹಾಸ್ವಾಮಿಗಳನ್ನು ಸರ್ಕಾರದ ಕಚೇರಿಗಳಿಗೆ ಮಠದ ಜಾಗೆ ಬಿಟ್ಟು ಕೊಡಲು ಕೇಳಿದಾಗ ಅದರಲ್ಲಿ ೨.೩೦ ಎಕರೆ ಶಾಲೆಗೆ ಕೊಡುವುದಾದರೆ ಜಾಗೆ ಕೊಡುವುದಾಗಿ ಹೇಳಿ ಈ ಜಾಗೆ ನೀಡಿದ್ದರು. ಹಾನಗಲ್ಲಿನ ಬಹುತೇಕ ಹಿರಿಯರು, ಗಣ್ಯರು ಓದಿದ ಶಾಲೆ ಇದು. ದಿ. ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ ಓದಿದ ಶಾಲೆ ಇದು. ಇಲ್ಲಿ ಓದಿದವರು ಹೊರ ದೇಶಗಳಲ್ಲಿ ದೊಡ್ಡ ಹುದ್ದೆ ಉದ್ಯೋಗದಲ್ಲಿದ್ದಾರೆ. ಹಿರಿಯರು ಜನ್ಮ ದಾಖಲೆಗಾಗಿ ಈಗಲೂ ಈ ಶಾಲೆಗೆ ಬರುತ್ತಾರೆ.

ಈ ಶಾಲೆ ಅಭಿವೃದ್ಧಿ ಪಡಿಸಬೇಕೆಂದು ಹತ್ತು ಹಲವು ಹೋರಾಟಗಳು ನಡೆದವು. ಪತ್ರ ಚಳವಳಿ, ಪಾಲಕರ ತಮಟೆ ಚಳುವಳಿ, ಮಕ್ಕಳ ಧರಣಿ, ಮನವಿ ಅರ್ಪಣೆ ಹೀಗೆ ಹೋರಾಟಗಳ ಹಿಂದೆ ಈ ಶಾಲೆಯನ್ನು ನಿಜವಾದ ಮಾದರಿ ಮಾಡಬೇಕೆಂಬ ಸಂಕಲ್ಪವಿತ್ತು. ಶಾಲೆಯ ಅಭಿವೃದ್ಧಿಗೆ ಸರ್ಕಾರದ ಮುಂದೆ ಕೈಯೊಡ್ಡಿ ಕುಳಿತರೆ ಆಗದು ಎಂದು ದಾನಿಗಳಿಗೆ ಮೊರೆ ಹೋದ ಶಾಲಾ ಅಭಿವೃದ್ಧಿ ಸಮಿತಿ ಹೊಸ ದಾರಿ ಹಿಡಿಯಿತು.

ಕ್ಯೂಆರ್‌ಕೋಡ್: ಈ ಶಾಲೆಯಲ್ಲಿ ಓದಿದ ಹೃದಯವಂತರನ್ನು ಸಂಪರ್ಕಿಸಲು ಶಾಲೆಯ ಕ್ಯೂಆರ್ ಕೋಡ್ ಬ್ಯಾಂಕಿನಿಂದ ಪಡೆದರು. ಇದು ರಾಜ್ಯದಲ್ಲಿಯೇ ಮೊದಲು. ಈ ಮೂಲಕ ದಾನಿಗಳಿಗೆ ಮೊರೆ ಹೋದ ಪರಿಣಾಮವಾಗಿ ನಿರೀಕ್ಷೆಗಿಂತ ಹೆಚ್ಚು ದಾನಿಗಳು ಧನಸಹಾಯಕ್ಕೆ ಮುಂದಾಗಿದ್ದಾರೆ. ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡವರಿಗೆ ಈಗ ಹೊಸ ನಿರೀಕ್ಷೆ ಮೂಡಿದೆ.

ಡೆಸ್ಕ್‌: ತಾಲೂಕಿನ ಶಾಸಕರ ಮಾದರಿ ಶಾಲೆ ಇದಾಗಿದ್ದು ಇಲ್ಲಿನ ಕೊಠಡಿಗಳು ದುರಸ್ತಿಯಲ್ಲಿರುವುದು, ಮಕ್ಕಳು ತಣ್ಣನೆಯ ನೆಲದ ಮೇಲೆ ಕುಳಿತಿರುವುದು, ಸ್ವಚ್ಛವಿಲ್ಲದ ಶೌಚಾಲಯ, ಸುಸಜ್ಜಿತವಲ್ಲದ ಆಟದ ಮೈದಾನ ಇದನ್ನೆಲ್ಲ ಗಮನಿಸಿ ಮೊದಲ ಬೇಡಿಕೆಯಾಗಿ ಸಂಸದ ಶಿವಕುಮಾರ ಉದಾಸಿ ಅವರಿಂದ ₹೯ ಲಕ್ಷಗಳಲ್ಲಿ ೧೯೦ ಡೆಸ್ಕ್‌ಗಳನ್ನು ಪಡೆಯಲು ಮುಂದಾಗಿ ಶಾಲಾ ಅಭಿವೃದ್ಧಿ ಸಮಿತಿ ಯಶಸ್ವಿಯಾಗಿದೆ.

ಈಗ ಎಲ್ಲ ಕೊಠಡಿಗಳನ್ನು ಸುಸಜ್ಜಿತವಾಗಿರಿಸಲು ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಭದ್ರತೆಗೂ ಆದ್ಯತೆ ನೀಡಲಾಗಿದೆ. ಎಲ್ಲ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ, ಎಲ್ಲ ಕೊಠಡಿಗಳಿಗೆ ಗ್ರೀನ್ ಬೋರ್ಡ್‌, ಫ್ಯಾನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ವಿಜ್ಞಾನ, ಗಣಿತ ಬೋಧನಾ ಸಾಮಗ್ರಿ ಖರೀದಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಆವರಣ ಗೋಡೆ ಎತ್ತರಗೊಳಿಸಲಾಗುತ್ತಿದೆ.

ಯಾರನ್ನೂ ಕೇಳದೆ ಈ ಶಾಲೆಯ ಮೇಲೆ ಪ್ರೀತಿ ಇರುವ ದಾನಿಗಳು ದಾನ ನೀಡುತ್ತಿದ್ದಾರೆ. ಸದ್ಯಕ್ಕೆ ಸಂಗ್ರಹವಾಗಿರುವ ₹೧೦ ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಒಳ್ಳೆಯ ಗಾರ್ಡನ್, ಅತ್ಯುತ್ತಮ ಆಟದ ಮೈದಾನ ಸೇರಿದಂತೆ ಹೊಸ ಯೋಜನೆ ಹಾಕಿಕೊಳ್ಳುವ ಯೋಚನೆ ಶಾಲಾ ಅಭಿವೃದ್ಧಿ ಸಮಿತಿ ಮುಂದಿದೆ.

ಸದ್ಯ ಶಾಲೆಯಲ್ಲಿ ೪೮೧ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಕೊರತೆ ಇದೆ. ಈಗ ಇಂಗ್ಲಿಷ್‌ ಮಾಧ್ಯಮವೂ ಇದ್ದು ಕನ್ನಡ ಶಿಕ್ಷಕರಿಗೆ ತರಬೇತಿ ನೀಡಿ ಇಂಗ್ಲಿಷ್‌ ಮಾಧ್ಯಮ ನಡೆಸಲಾಗುತ್ತಿದೆ. ಇದರಿಂದ ಕನ್ನಡ ಮಕ್ಕಳಿಗೆ ಶಿಕ್ಷಕರ ಕೊರತೆ ಇದೆ. ತಾಲೂಕಿನ ಶಾಸಕರ ಮಾದರಿ ಶಾಲೆ ಮಾದರಿಯಾಗಲು ಸರ್ಕಾರ ಕೃಪೆ ತೋರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.