ಕರಾವಳಿಯಲ್ಲಿ ಪರಂಪರೆಯ ಆಟಿ ಅಮವಾಸ್ಯೆ ಆಚರಣೆ

| Published : Aug 05 2024, 12:40 AM IST

ಸಾರಾಂಶ

ಸಾವಿರಾರು ಭಕ್ತಾದಿಗಳು ಆಗಮಿಸಿ ಇಲ್ಲಿನ ಗದಾತೀರ್ಥ ಎಂಬ ಬೃಹತ್ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಆಟಿ ಅಮಾವಾಸ್ಯೆಯ ತೀರ್ಥಸ್ನಾನದ ಹಿನ್ನೆಲೆಯಲ್ಲಿ ತಾಲೂಕಿನ ನರಹರಿ ಹಾಗೂ ಕಾರಿಂಜ ಬೆಟ್ಟದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ತೀರ್ಥಸ್ನಾನ ಗೈದರು.ಕಾರಿಂಜೇಶ್ವರ ಕ್ಷೇತ್ರ: ಕಾವಳಮೂಡೂರು ಗ್ರಾಮದ ಕಾರಿಂಜ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನಕ್ಕೆ ಭಕ್ತ ಜನಸಾಗರ ಹರಿದು ಬಂತು.ಸಾವಿರಾರು ಭಕ್ತಾದಿಗಳು ಆಗಮಿಸಿ ಇಲ್ಲಿನ ಗದಾತೀರ್ಥ ಎಂಬ ಬೃಹತ್ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ಪಾರ್ವತಿ- ಪರಮೇಶ್ವರರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿದರು.ಆಟಿ ಅಮವಾಸ್ಯೆ ಸಂದರ್ಭದಲ್ಲಿ ನವದಂಪತಿಗಳು ಬಾಗಿನ ಅರ್ಪಿಸಿದರೆ ದಾಂಪತ್ಯ ಜೀವನ ಒಳಿತಾಗುವುದು ಮತ್ತು ತೀರ್ಥ ಸ್ನಾನದಿಂದ ಸರ್ವರೋಗ ಪರಿಹಾರ ಎಂಬ ಪ್ರತೀತಿ ಇರುವುದರಿಂದ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಮುಂಜಾನೆ ಸುಮಾರು 3 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಭಕ್ತರಿಗೆ ಹಾಲೆಯ ಕೆತ್ತೆ ಕಷಾಯ ವಿತರಣೆ ನಡೆಯಿತು. ವಿವಿಧ ತಂಡಗಳಿಂದ ಭಜನೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಡಿವೈಎಸ್‌ಪಿ ವಿಜಯೇಂದ್ರ ಪ್ರಸಾದ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಹಾಗೂ ಮತ್ತಿತರರು ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಸಮಿತಿ ಸದಸ್ಯರು, ಗ್ರಾಮಣಿಗಳು, ಸಿಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು. ನರಹರಿ ಶ್ರೀ ಸದಾಶಿವ ಕ್ಷೇತ್ರದಲ್ಲಿ ಆಟಿ ಅಮವಾಸ್ಯೆಯ ಪ್ತಯುಕ್ತ ತೀರ್ಥ ಸ್ನಾನ ನಡೆಯಿತು. ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ತೀರ್ಥ ಸ್ನಾನ ಮಾಡಿ ದೇವರ ಪ್ರಸಾದ ಸ್ವೀಕರಿಸಿದರು.