ಸನ್ಮಾನಗಳು ಸಾರ್ಥಕತೆ ತರುತ್ತವೆ: ದತ್ತಮೂರ್ತಿ ಭಟ್

| Published : Aug 05 2024, 12:40 AM IST

ಸನ್ಮಾನಗಳು ಸಾರ್ಥಕತೆ ತರುತ್ತವೆ: ದತ್ತಮೂರ್ತಿ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸಪ್ತಕ ಸಂಸ್ಥೆ ಬೆಂಗಳೂರು, ಕರ್ನಾಟಕ ಸಂಘಗಳ ಸಹಯೋಗದಲ್ಲಿ ದ್ವಾನ್ ದತ್ತಮೂರ್ತಿ ಭಟ್ ದಂಪತಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸನ್ಮಾನಗಳು ಸಾರ್ಥಕತೆ ತರುತ್ತವೆ ಎಂದು ತಾಳಮದ್ದಳೆ ಖ್ಯಾತಿ ವಿದ್ವಾನ್ ದತ್ತಮೂರ್ತಿ ಭಟ್ ಹೇಳಿದರು.

ಸಪ್ತಕ ಸಂಸ್ಥೆ ಬೆಂಗಳೂರು, ಕರ್ನಾಟಕ ಸಂಘಗಳ ಸಹಯೋಗದಲ್ಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸನ್ಮಾನ ಹಾಗೂ ತಾಳಮದ್ದಲೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸನ್ಮಾನ ಎಂಬುದು ನಮ್ಮ ಕ್ರಿಯಾಶೀಲತೆ ಮತ್ತಷ್ಟು ಹೆಚ್ಚಿಸುತ್ತದೆ. ಅವಮಾನಗಳು, ಅನುಮಾನಗಳು ಸನ್ಮಾನಕ್ಕೆ ದಾರಿಯಾಗುತ್ತವೆ. ಒಬ್ಬ ವ್ಯಕ್ತಿ ಸನ್ಮಾನದ ಹಿಂದೆ ಅನೇಕ ನೋವು, ಸಂಕಷ್ಟಗಳು ಇರುತ್ತವೆ. ಕರ್ನಾಟಕ ಸಂಘ ಮತ್ತು ಸಪ್ತಕ ಸಂಸ್ಥೆಯವರು ನನಗೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಹೆಮ್ಮೆಯಾಗಿದೆ ಎಂದರು.

ತಾಳಮದ್ದಳೆ ಎಂಬುದು ಒಂದು ವಿಶಿಷ್ಟವಾದ ಕಲೆ. ಯಕ್ಷಗಾನದಲ್ಲಿ ವೇಷವಿರುತ್ತದೆ. ಆದರೆ ಇಲ್ಲಿ ವೇಷವಿಲ್ಲದ ಪಾತ್ರಗಳು ಇರುತ್ತವೆ. ಪೌರಾಣಿಕ ಸಂಗತಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ತಾಳಮದ್ದಳೆ ಸುಲಭದ ದಾರಿಯಾಗಿದೆ ಎಂದು ಹೇಳಿದರು.

ಸಪ್ತಕ ಸಂಸ್ಥೆ ಜಿ.ಎಸ್.ಹೆಗಡೆ ಮಾತನಾಡಿ, ದತ್ತಮೂರ್ತಿ ಅವರು ಒಬ್ಬ ಶ್ರೇಷ್ಠ ಕಲಾವಿದರು. ಅವರನ್ನು ನಾವು ಪ್ರೀತಿಯಿಂದ ದತ್ತು ಎನ್ನುತ್ತೇವೆ. ಅವರು ತಮ್ಮ ಕಲೆಗಾಗಿ ಜೀವನವನ್ನೇ ದಂಡಿಸಿಕೊಂಡಿದ್ದಾರೆ. ಕಲೆ ಅವರನ್ನು ಕೈಬಿಟ್ಟಿಲ್ಲ ಈಗಲೂ ವೇಷ ಕಟ್ಟುತ್ತಾರೆ. ಅವ್ಯಕ್ತ ಶಕ್ತಿ ಅವರಲ್ಲಿದೆ. ಅವರೊಬ್ಬ ಬಹುದೊಡ್ಡ ಸಾಧಕರು ವಿರಾಟ ಸ್ವರೂಪ ಅವರದು. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಮಾತನಾಡಿ, ಯಕ್ಷಗಾನ ಎಂಬುದು ಆರಾಧನಾ ಕಲೆಯಾಗಿದೆ. ಚರಿತ್ರೆ ವ್ಯಕ್ತಿಗಳನ್ನು ಕೂಡ ಈ ಮೂಲಕ ಪರಿಚಯಿಸಬಹುದು. ಸಂಸ್ಕೃತಿ ಬಿಂಬಿಸುವ ಕಲೆ ಇದು. ತಾಳಮದ್ದಳೆಯಲ್ಲಿ ವೇಷ ಭೂಷಣಗಳು ಪಾತ್ರಗಳು ಜೀವಂತಿಕೆ ಪಡೆಯುತ್ತವೆ. ಆಸಕ್ತಿ ಕೆರಳಿಸುತ್ತದೆ. ಇದೊಂದು ಮಾತಿನ ಮೋಡಿ ಕಲೆ. ಶಾಸ್ತ್ರೀಯತೆ ಇದರಲ್ಲಿ ಅಡಗಿದೆ ಎಂದರು.

ಸನ್ಮಾನ ಕಾರ್ಯಕ್ರಮದ ನಂತರ ನಡೆದ ತಾಳಮದ್ದಲೆ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಕಲಾವಿದರು ಭರತಾಗಮನ ಪ್ರಸಂಗ ನಡೆಸಿಕೊಟ್ಟರು. ಭಾಗವತರಾದ ಗೋಪಾಲಕೃಷ್ಣ ಭಾಗವತ ಜೋಗಿಮನೆ, ಮದ್ದಳೆಯಲ್ಲಿ ಪಿ.ಕೆ. ಹೆಗಡೆ ಅರಿಕೆರೆ, ಕುಮಾರ ಮಯೂರ ಹೆಗಡೆ ಹಿಮ್ಮೇಳದಲ್ಲಿದ್ದರು. ಮುಮ್ಮೇಳದಲ್ಲಿ ಶ್ರೀರಾಮನ ಪಾತ್ರದಲ್ಲಿ ಡಾ.ಶಾಂತರಾಮ ಪ್ರಭು, ಭರತನ ಪಾತ್ರದಲ್ಲಿ ನಾರಾಯಾಣ ಯಾಜಿ, ವಸಿಷ್ಠರ ಪಾತ್ರದಲ್ಲಿ ಎಂ.ಕೆ. ರಮೇಶ್ ಆಚಾರ್ಯ ಮತ್ತು ಲಕ್ಷ್ಮಣ ಪಾತ್ರದಲ್ಲಿ ದತ್ತಮೂರ್ತಿ ಭಟ್ ಗಮನಸೆಳೆದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಪ್ರೊ.ಆಶಾಲತಾ ಎಂ. ಇದ್ದರು. ಇದೇ ಸಂದರ್ಭದಲ್ಲಿ ವಿದ್ವಾನ್ ದತ್ತಮೂರ್ತಿ ಭಟ್ ದಂಪತಿ ಸನ್ಮಾನಿಸಲಾಯಿತು.