ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ಈ ಬೇಡಿಕೆಯನ್ನು ತರಲಾಗಿತ್ತು

ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಮಾಯಣದ ಎರಡು ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯೆ ಮತ್ತು ನೇಪಾಳದ ಜನಕಪುರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆದಿದೆ. ಆದರೆ, ಹನುಮಂತನ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ಸೀತೆಯ ಜನ್ಮಸ್ಥಳಕ್ಕೆ ರೈಲು ಬಂದಿರುವಾಗ ಹನುಮಂತನ ಜನ್ಮಸ್ಥಳದಿಂದ ರಾಮನ ಜನ್ಮಭೂಮಿಗೆ ರೈಲು ಯಾವಾಗ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಹಾಗೂ ಸೀತೆಯ ಜನ್ಮಭೂಮಿ ಎಂದು ನಂಬಲಾಗಿರುವ ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ. ಇದರಿಂದ ರಾಮಾಯಣದೊಂದಿಗೆ ನಂಟು ಹೊಂದಿರುವ ಎರಡು ಪ್ರಮುಖ ಕ್ಷೇತ್ರಗಳ ನಡುವಿನ ಧಾರ್ಮಿಕ ಸಂಪರ್ಕ ಮತ್ತಷ್ಟು ಬಲಗೊಂಡಂತಾಗಿದೆ.

ಅಂಜನಾದ್ರಿಗೆ ಸಂಪರ್ಕ ಯಾವಾಗ: ರಾಮಾಯಣದಲ್ಲಿ ಶ್ರೀರಾಮನಿಗೆ ಹನುಮಂತನ ನಂಟು ಅವಿನಾಭಾವ. ಹೀಗಾಗಿ ಅಯೋಧ್ಯೆ ಮತ್ತು ಅಂಜನಾದ್ರಿ ನಡುವೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳವೆಂಬ ನಂಬಿಕೆಯಿಂದ ದೇಶದ ವಿವಿಧ ಭಾಗಗಳ ಭಕ್ತರನ್ನು ಆಕರ್ಷಿಸುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡ ಬಳಿಕ ಈ ಭಾಗದ ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೆಚ್ಚಿನ ಮಹತ್ವ ಬಂದಿದೆ.

2023 ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಕೊಪ್ಪಳದ ಅಂದಿನ ಸಂಸದ ಕರಡಿ ಸಂಗಣ್ಣ ಅವರು ಅಂಜನಾದ್ರಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದ್ದರು. ಈ ರೈಲಿಗೆ ''''''''ರಾಮಾಂಜನೇಯ ಎಕ್ಸ್‌ಪ್ರೆಸ್'''''''' ಎಂದು ಹೆಸರಿಡುವ ಪ್ರಸ್ತಾವವನ್ನೂ ಮುಂದಿಟ್ಟಿದ್ದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ಈ ಬೇಡಿಕೆಯನ್ನು ತರಲಾಗಿತ್ತು. ಅಂಜನಾದ್ರಿ-ಅಯೋಧ್ಯೆ ನಡುವೆ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವ ಪರಿಶೀಲಿಸುವ ಭರವಸೆಯೂ ದೊರೆತಿತ್ತು. ಆದರೆ, ಈವರೆಗೆ ರೈಲು ಸಂಚಾರ ಆರಂಭದ ಕುರಿತು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.

ಪ್ರವಾಸೋದ್ಯಮಕ್ಕೆ ಹೊಸ ಆಯಾಮ: ಅಂಜನಾದ್ರಿ, ಪಂಪಾಸರೋವರ, ಕಿಷ್ಕಿಂಧಾ, ಆನೆಗೊಂದಿ ಸೇರಿದಂತೆ ರಾಮಾಯಣದ ನಂಟು ಹೊಂದಿರುವ ಹಲವು ಧಾರ್ಮಿಕ ಹಾಗೂ ಐತಿಹಾಸಿಕ ತಾಣಗಳು ಕೊಪ್ಪಳ ಜಿಲ್ಲೆಯಲ್ಲಿವೆ. ಅಯೋಧ್ಯೆಯಿಂದ ನೇರ ರೈಲು ಸಂಪರ್ಕ ಕಲ್ಪಿಸಿದರೆ ಉತ್ತರ ಭಾರತದ ಭಕ್ತರು ಸುಲಭವಾಗಿ ಅಂಜನಾದ್ರಿಗೆ ಆಗಮಿಸಬಹುದು. ಇದರಿಂದ ಧಾರ್ಮಿಕ ಪ್ರವಾಸೋದ್ಯಮದ ಜತೆಗೆ ಸ್ಥಳೀಯ ವ್ಯಾಪಾರ, ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ.

ಸೀತೆಯ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದ ಜನಕಪುರಿಗೆ ರೈಲು ಸಂಪರ್ಕ ಕಲ್ಪಿಸಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿಗೂ ಆದ್ಯತೆ ನೀಡಬೇಕಿದೆ. ಅಯೋಧ್ಯೆ-ಜನಕಪುರಿ ರೈಲು ಸಂಪರ್ಕದ ಬೆನ್ನಲ್ಲೇ ಅಂಜನಾದ್ರಿ-ಅಯೋಧ್ಯೆ ರೈಲು ಬೇಡಿಕೆಗೆ ಕೇಂದ್ರ ರೈಲ್ವೆ ಇಲಾಖೆ ಸ್ಪಂದಿಸಬೇಕಿದೆ.

ಸೀತೆಯೂರಿಗೆ ರೈಲು ಬಂತು, ಹನುಮನೂರಿಗೆ ಯಾವಾಗ? ಎಂಬುದು ಈಗ ಕೊಪ್ಪಳ ಜಿಲ್ಲೆಯ ಜನರ ನಿರೀಕ್ಷೆಯಾಗಿದೆ.

ಈ ಹಿಂದೆಯೇ ಈ ಬೇಡಿಕೆಯನ್ನು ಪ್ರಸ್ತಾಪ ಮಾಡಿದ್ದರೂ ಸಹ ಜಾರಿಯಾಗಿಲ್ಲ. ಇದರಿಂದ ಸ್ಥಳೀಯ ಪ್ರವಾಸೋಧ್ಯಮ ಅಭಿವೃದ್ಧಿಯಾಗುತ್ತದೆ ಮತ್ತು ರಾಮಾಯಣದ ಎರಡ ಪ್ರಮುಖ ಸ್ಛಳಗಳಿಗೆ ಸಂಪರ್ಕ ಏರ್ಪಡುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಇದು ತುರ್ತಾಗಿ ಆಗಬೇಕಾಗಿರುವ ಕಾರ್ಯವಾಗಿದ್ದು, ಅಯೋಧ್ಯೆ ಮಾದರಿಯಲ್ಲಿಯೇ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವಂತೆ ಮತ್ತು ರೈಲು ಸಂಪರ್ಕ ಕಲ್ಪಿಸುವಂತೆ ಪ್ರಸ್ಥಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.