ಮಳೆಗೆ ಸೋರುತಿಹುದು ಸಾರಿಗೆಯ ಬಸ್ಸು

| Published : Jun 14 2024, 01:05 AM IST

ಸಾರಾಂಶ

ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಇಲ್ಲಿನ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ.

ಬಸ್‌ ನಿಲ್ದಾಣ ಕಾಮಗಾರಿ ಆರಂಭಗೊಂಡು 3 ವರ್ಷ ಕಳೆದರೂ ಕುಂಟುತ್ತಾ ಸಾಗಿದೆ. ಇದರಿಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದೆ. ಕುಡಿವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯಕ್ಕೆ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ವ್ಯವಸ್ಥೆಯೇ ಇಲ್ಲ. ಶೌಚಾಲಯ ಪಕ್ಕದಲ್ಲಿರುವ ಚರಂಡಿಯಲ್ಲಿ ಹೂಳು ಕಸ ತುಂಬಿಕೊಂಡು ದುರ್ನಾತ ಬೀರುತ್ತಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಇರಬೇಕಾದ ಸ್ಥಿತಿ ಇದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಇರುವ ಶೌಚಾಲಯಗಳಲ್ಲಿ ಸ್ವಚ್ಛತೆಯೇ ಇಲ್ಲ. ವಯೋವೃದ್ಧರು, ಅಂಗವಿಕಲರಿಗೆ ಶೌಚಾಲಯಕ್ಕೆ ಹೋಗಲು ಸರಿಯಾದ ದಾರಿಯೇ ಇಲ್ಲದಂತಾಗಿದೆ. ಬಸ್‌ ನಿಲ್ದಾಣಕ್ಕೆ ಎತ್ತರವಾಗಿ ಸಿಸಿ ರಸ್ತೆ ಹಾಕಿರುವ ಹಿನ್ನೆಲೆಯಲ್ಲಿ ಶೌಚಾಲಯಗಳು ತಗ್ಗು ಪ್ರದೇಶದಲ್ಲಿವೆ. ಅಕ್ಕಪಕ್ಕದ ಚರಂಡಿಗಳು ಮಳೆ ನೀರಿನಿಂದ ಆವೃತವಾಗುತ್ತವೆ. ಇದರಿಂದ ಪ್ರಯಾಣಿಕರು ಶೌಚಾಲಯಕ್ಕೆ ಪರದಾಡುವ ಪರಿಸ್ಥಿತಿ ಇದೆ.

ಬಸ್‌ ನಿಲ್ದಾಣದಲ್ಲಿರುವ ಘನತ್ಯಾಜ್ಯವನ್ನು ತಗ್ಗು ಪ್ರದೇಶದಲ್ಲಿ ಹಾಕಿದ್ದಾರೆ. ಇದನ್ನು ಈವರೆಗೂ ವಿಲೇವಾರಿ ಮಾಡಿಲ್ಲ. ಇದರಿಂದ ನಿಲ್ದಾಣದಲ್ಲಿನ ಮಳೆ ನೀರು ಹರಿದು ಹೋಗಲು ದಾರಿ ಇಲ್ಲದಂತಾಗಿದೆ.

ಸೋರುವ ಬಸ್‌ಗಳು:

ಇಲ್ಲಿನ ಸಾರಿಗೆ ಘಟಕದ 20ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಸೋರುತ್ತಿವೆ. ಪ್ರಯಾಣಿಕರು ವಿಧಿ ಇಲ್ಲದೇ ಸಂಚರಿಸುತ್ತಾರೆ. ಸೋರುವ ಬಸ್‌ಗಳನ್ನು ಮಳೆಗಾಲ ಬಂದರೂ ದುರಸ್ತಿ ಮಾಡುತ್ತಿಲ್ಲ. ಬಸ್‌ಗಳಲ್ಲಿ ಆಸನಗಳು ಕಿತ್ತು ಹೋದರೂ ರಿಪೇರಿ ಮಾಡುತ್ತಿಲ್ಲ. ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಬೇಕಿದೆ ಎಂದು ದೂರುತ್ತಾರೆ ಪ್ರಯಾಣಿಕರು.

ಬಸ್‌ ನಿಲ್ದಾಣದ ಇಕ್ಕೆಲಗಳ ರಸ್ತೆಯಲ್ಲಿ ಹತ್ತಾರು ಗೂಡಂಗಡಿಗಳನ್ನು ಹಾಕಿದ್ದಾರೆ. ಆ ಅಂಗಡಿಗಳ ಪ್ಲಾಸ್ಟಿಕ್ ಹಾಗೂ ಕಸವನ್ನು ಬಸ್‌ ನಿಲ್ದಾಣದಲ್ಲೇ ಸುರಿಯುತ್ತಾರೆ. ಇದನ್ನು ಯಾರು ಸ್ವಚ್ಛತೆ ಮಾಡುತ್ತಿಲ್ಲ. ಈ ಕುರಿತು ಸಾರಿಗೆ ಘಟಕಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪ್ರಯಾಣಿಕರಿಗೆ ಸರಿಯಾಗಿ ಆಸನಗಳ ವ್ಯವಸ್ಥೆ ಮಾಡಿಲ್ಲ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲ. ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಬಸ್‌ ನಿಲ್ದಾಣದಲ್ಲಿರುವ ಚರಂಡಿಗಳಲ್ಲಿನ ಹೂಳು ತೆರವು ಮಾಡಲಾಗಿದೆ. ವಿಲೇವಾರಿ ಬಾಕಿ ಇದೆ. ಶೌಚಾಲಯದ ಪಕ್ಕದ ಚರಂಡಿ ಸ್ವಚ್ಛಗೊಳಿಸಲು ಕ್ರಮ ವಹಿಸುತ್ತೇವೆ. ಹೊಸ ಬಸ್‌ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಹೊಸ ಶುದ್ಧ ಕುಡಿವ ನೀರಿನ ಘಟಕ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಮಾಡುತ್ತಾರೆ. ಮಳೆಗೆ ಸೋರುವ ಬಸ್‌ ದುರಸ್ತಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಹೂವಿನಹಡಗಲಿ ಸಾರಿಗೆ ಘಟಕ ವ್ಯವಸ್ಥಾಪಕ ವೆಂಕಟಚಲಪತಿ.

ಹೊಸ ಬಸ್‌ ನಿಲ್ದಾಣ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಆಗಸ್ಟ್‌ 15ರೊಳಗೆ ಕಾಮಗಾರಿ ಮುಗಿಯಲಿದೆ ಎನ್ನುತ್ತಾರೆ ಹೊಸಪೇಟೆ ಕೆಎಸ್‌ಆರ್‌ಟಿಸಿ ಎಂಜಿನಿಯರ್‌ ಮಲ್ಲಿಕಾರ್ಜುನ ಬಿರಾದಾರ್‌.