ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿ, ಅನಾರೋಗ್ಯದಿಂದ ನಿಧನರಾದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ನಗರದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆ ಆರಂಭಕ್ಕೆ ಮುನ್ನ ನಿಧನರಾದ ಪತ್ರಕರ್ತ ವಸಂತ ನಾಡಿಗೇರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.ಈ ವೇಳೆ ಹಿರಿಯ ಪತ್ರಕರ್ತ ಅಶೋಕ ಯಡಳ್ಳಿ ಮಾತನಾಡಿ, ಕನ್ನಡ ಪ್ರತಿಕೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ವಸಂತ ನಾಡಿಗೇರ ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು. ವಸಂತ ನಾಡಿಗೇರ ಅವರ ಬರವಣಿಗೆ, ಸರಳತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ತಂತ್ರಗಾರಿಕೆ ನಿಜಕ್ಕೂ ಮಾದರಿ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ಎಂದರು.
ಪತ್ರಕರ್ತ ನವೀದ್ ಅಂಜುಮ ಮಮದಾಪೂರ ಮಾತನಾಡಿ, ವಸಂತ ನಾಡಿಗೇರ ಅವರು ಸಂಯುಕ್ತ ಕರ್ನಾಟಕಕ್ಕೆ ಆಗಮಿಸಿದಾಗ ಸಂಸ್ಥೆಗೆ ಮತ್ತೆ ವಸಂತ ಕಾಲ ಎಂದು ಸಂಭ್ರಮಿಸಿದ್ದೆವು. ಅವರ ಮಾರ್ಗದರ್ಶನದಲ್ಲಿ ಪತ್ರಿಕಾರಂಗ ಇನ್ನಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಇತ್ತು. ಅವರ ಅಕಾಲಿಕ ಅಗಲಿಕೆ ನೋವುಂಟು ಮಾಡಿದೆ. ಇಡೀ ಪತ್ರಿಕೋದ್ಯಮಕ್ಕೆ ಆಸ್ತಿಯಾಗಿದ್ದ ನಾಡಿಗೇರ ಯುವ ಪತ್ರಕರ್ತರಿಗೆ ಆದರ್ಶವಾಗಿದ್ದರು ಎಂದು ಸ್ಮರಿಸಿದರು.ಹಿರಿಯ ಪತ್ರಕರ್ತ ಶರಣು ಮಸಳಿ ಮಾತನಾಡಿ, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಮೇರು ವ್ಯಕ್ತಿತ್ವದ ಪತ್ರಕರ್ತರ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದೇ ವಸಂತ ನಾಡಿಗೇರ. ಸುದ್ದಿಗಳಿಗೆ ಹೆಡ್ ಲೈನ್ ಮೂಲ ಜೀವಾಳ. ಆ ಜೀವ ಕಳೆ ತುಂಬುವ ವಿಶಿಷ್ಟ ನೈಪುಣ್ಯತೆ ನಾಡಿಗೇರ ಅವರಲ್ಲಿತ್ತು ಎಂದು ಹೇಳಿದರು.
ಪತ್ರಿಕೆ ಸಂಪಾದಕ ಇರ್ಫಾನ್ ಶೇಖ ಮಾತನಾಡಿ, ಮೂರು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿ ತಮ್ಮದೇ ಛಾಪು ಮೂಡಿಸಿದ್ದ ವಸಂತ ನಾಡಿಗೇರ ಅವರ ಅಗಲಿಕೆ ನಮಗೆಲ್ಲ ಅತೀ ನೋವಿನ ಸಂಗತಿ. ಇದು ಅವರು ಜೀವ ಬಿಡುವ ಸಮಯ ಆಗಿರಲಿಲ್ಲ. ಇನ್ನಷ್ಟು ಪತ್ರಕರ್ತರನ್ನು ತಿದ್ದುವ ಹಾಗೂ ಅವರಲ್ಲಿನ ಜ್ಞಾನವನ್ನು ಸಂಸ್ಥೆಗಳಿಗೆ, ಪತ್ರಕರ್ತರಿಗೆ ಹಂಚುವ ಸಮಯ. ಅವರ ಅಕಾಲಿಕ ನಿಧನದ ನೋವು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಪ್ರಾರ್ಥಿಸಿದರು.ಈ ವೇಳೆ ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ್ ಆಪ್ಟೆ, ಕಾರ್ಯದರ್ಶಿ ಅವಿನಾಶ ಬಿದರಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶಶಿಕಾಂತ ಮೆಂಡೆಗಾರ, ಗುರುರಾಜ ಗದ್ದನಕೇರಿ, ಸಮೀರ ಇನಾಮದಾರ, ಕಾನಿಪ ಸದಸ್ಯರಾದ ಶರಣು ಮರನೂರ, ಸಿದ್ದು, ಪ್ರಕಾಶ ಹಡಪದ ಮತ್ತಿತರರು ಉಪಸ್ಥಿತರಿದ್ದರು.--------
ಕೋಟ್....ಪತ್ರಕರ್ತ ವಸಂತ ನಾಡಿಗೇರ ಅವರು ಇಡೀ ಪತ್ರಿಕೋದ್ಯಮದ ಹೆಡ್ ಮಾಸ್ಟರ್ ಆಗಿದ್ದರು. ಕಿರಿಯ ಪತ್ರಕರ್ತರಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಚೆನ್ನಾಗಿತ್ತು. ಸರಳ ವ್ಯಕ್ತಿತ್ವ, ಮೃದು ಮನಸ್ಸಿನ ಮೇಧಾವಿ ಪತ್ರಕರ್ತನನ್ನು ಕಳೆದುಕೊಂಡ ಕನ್ನಡ ಪತ್ರಿಕೋದ್ಯಮಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ.
ಸಂಗಮೇಶ ಚೂರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ