ಸಾರಾಂಶ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಬೇಡಿ. ಅದು ನಿಮಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲೇ ನೀವು ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದೀರಿ ಎನ್ನುವುದನ್ನು ಮರೆಯಬೇಡಿ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿರೋಧ ಪಕ್ಷಗಳ ಟೀಕೆಗಳನ್ನು ಮಾರ್ಗದರ್ಶನ ಎಂದು ತಿಳಿದುಕೊಂಡು ಅವುಗಳನ್ನು ಮುಕ್ತವಾಗಿ ಸ್ವೀಕರಿಸುವವನೇ ನಿಜವಾದ ನಾಯಕ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದರು.ಅಧಿಕಾರದಲ್ಲಿರುವವರು ಎಂದೂ ತಾಳ್ಮೆ ಕಳೆದುಕೊಳ್ಳಬಾರದು. ಸಚಿವರು ತಾಳ್ಮೆ ಕಳೆದುಕೊಂಡವರಂತೆ ಕಂಡುಬರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ನಮ್ಮನ್ನು ಯಾರೂ ಟೀಕೆ ಮಾಡಬಾರದು ಎಂಬ ನಡವಳಿಕೆ ಸರಿಯಲ್ಲ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಕಾರ್ಯದ ಮೂಲಕ ಉತ್ತರ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಬೇಡಿ. ಅದು ನಿಮಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲೇ ನೀವು ರಾಜಕೀಯವಾಗಿ ಮುನ್ನೆಲೆಗೆ ಬಂದಿದ್ದೀರಿ ಎನ್ನುವುದನ್ನು ಮರೆಯಬೇಡಿ. ಹಗುರ ಮತ್ತು ಲಘುವಾದ ಮಾತುಗಳು ನಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತವೆ. ಜಿಲ್ಲೆಯ ಯಾವುದೇ ರಾಜಕೀಯ ಪಕ್ಷದ ಮುಖಂಡರು ತಾಳ್ಮೆಯಿಂದ ಕೆಲಸ ಮಾಡಿದರೆ ರಾಜಕೀಯ ವಾತಾವರಣ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.ಕಾವೇರಿ ಉಳಿವಿಗೆ ಎಲ್ಲರೂ ಒಂದಾಗೋಣ:
ಮಳೆ, ಪ್ರವಾಹ ಬಂದು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಅವಶ್ಯಕತೆಗಿಂತ ಹೆಚ್ಚಾಗಿ ತಮಿಳುನಾಡಿಗೆ ನೀರು ಹೋಗುತ್ತಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣ ಎಲ್ಲರ ಆದ್ಯ ಕರ್ತವ್ಯವಾಗಬೇಕು. ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರನ್ನು ನಿಲ್ಲಿಸಬೇಕಿದೆ. ಹೆಚ್ಚುವರಿ ನೀರಿನ ಬಳಕೆಗೆ ಕಾರ್ಯಯೋಜನೆ ರೂಪಿಸಿಕೊಂಡು ರೈತರ ಹಿತ ಕಾಪಾಡುವ ಅಗತ್ಯವಿದೆ. ತಮಿಳುನಾಡಿನ ರೀತಿ ಹಠಕ್ಕೆ ಬಿದ್ದು ಹೋರಾಟ ಮಾಡಿ. ಎಲ್ಲ ನಾಯಕರು ಒಟ್ಟಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಿರುವ ಸಮಸ್ಯೆ ಬಗೆಹರಿಸಿ. ಎರಡೂ ರಾಜ್ಯದ ಮುಖ್ಯಮಂತ್ರಿಗಳು ಮಾತನಾಡಿ ಅಣೆಕಟ್ಟು ವಿಷಯವಾಗಿ ಒಮ್ಮತಕ್ಕೆ ಬಂದು ವ್ಯರ್ಥವಾಗುವ ನೀರನ್ನು ಉಳಿಸಿಕೊಳ್ಳುವುದಕ್ಕೆ ನಮ್ಮ ಮೊದಲ ಆದ್ಯತೆ ಇರಬೇಕು. ಕಾವೇರಿ ಸಮಸ್ಯೆ ಪರಿಹಾರಕ್ಕೆ ಪ್ರಾಮುಖ್ಯತೆ ಕೊಡೋಣ. ನಿತ್ಯವೂ ಒಬ್ಬರನ್ನೊಬ್ಬರು ಟೀಕೆ ಮಾಡುವುದು ಸರಿಯಲ್ಲ. ಇದನ್ನು ಎಲ್ಲರೂ ನಿಲ್ಲಿಸಿ ಕಾವೇರಿ ಉಳಿವಿಗಾಗಿ ಒಂದಾಗೋಣ ಎಂದು ತಿಳಿಸಿದರು.ಸಿ.ಡಿ. ಗಂಗಾಧರ್ ಕಬ್ಬು ಅರೆಯುವಿಕೆ ಬಗ್ಗೆ ಯೋಚಿಸಲಿ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈಷುಗರ್ ಅಧ್ಯಕ್ಷರೂ ಆಗಿರುವ ಸಿ.ಡಿ. ಗಂಗಾಧರ್ ಅವರು ಕಬ್ಬು ಅರೆಯುವಿಕೆ ಬಗ್ಗೆ ಯೋಚನೆ ಮಾಡಲಿ. ಪಾಂಡವಪುರದ ಕಾರ್ಯಕ್ರಮ ಪೂರ್ವನಿಗದಿತ ಕಾರ್ಯಕ್ರಮ. ಏಕೆ ಕುಮಾರಸ್ವಾಮಿ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುತ್ತೀರಿ? ಎಂದು ಪ್ರಶ್ನಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಎಂ.ಎಲ್.ತುಳಸೀಧರ್, ಹನಕೆರೆ ನಾಗಪ್ಪ, ಬೋರೇಗೌಡ, ಸಿ.ಕೆ. ಸ್ವಾಮಿಗೌಡ, ಸಾತನೂರು ಜಯರಾಂ ಹಾಜರಿದ್ದರು.