ಒಬ್ಬ ನೈಜ ಕವಿ ರೂಪಕಗಳ ಹುಡುಕಾಟದಲ್ಲಿರುತ್ತಾನೆ

| Published : May 13 2025, 01:21 AM IST

ಸಾರಾಂಶ

ವೃತ್ತಿಯಲ್ಲಿ ಕೃಷಿಕರೂ ಪ್ರವೃತ್ತಿಯಲ್ಲಿ ಲೇಖಕರೂ ಆಗಿರುವ ಮಹೇಶ್ ಭಾರದ್ವಾಜ್ ಹಂದ್ರಾಳುರವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೇಲೂರು ತಾಲೂಕು ಹಗರೆ ಸಮೀಪದ ಹಂದ್ರಾಳು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲಿ ನಡೆಯಿತು. ಒಳಗೆ ತಳಮಳವಿಲ್ಲದ ಯಾವುದೇ ಸಾಹಿತಿ ಅಥವಾ ಕವಿ ಉತ್ತಮವಾದುದನ್ನು ಸೃಷ್ಟಿಸಲಾರ. ಮಹೇಶ್ ಭಾರದ್ವಾಜರ ಪ್ರತಿಯೊಂದು ಅಂಕಣ ಬರಹಗಳಲ್ಲಿ ಏಕತಾನತೆಗೆ ಬದಲಾಗಿ ವೈವಿಧ್ಯತೆ ಮತ್ತು ಜೀವನಾನುಭವಗಳ ಕಸುವು ತುಂಬಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ವೃತ್ತಿಯಲ್ಲಿ ಕೃಷಿಕರೂ ಪ್ರವೃತ್ತಿಯಲ್ಲಿ ಲೇಖಕರೂ ಆಗಿರುವ ಮಹೇಶ್ ಭಾರದ್ವಾಜ್ ಹಂದ್ರಾಳುರವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೇಲೂರು ತಾಲೂಕು ಹಗರೆ ಸಮೀಪದ ಹಂದ್ರಾಳು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳದಲ್ಲಿ ನಡೆಯಿತು.

ವೈಚಾರಿಕ ಲೇಖನಗಳ ಸಂಕಲನ "ಒರೆಗಲ್ಲು " ಪುಸ್ತಕವನ್ನು ಲೇಖಕರೂ ಮತ್ತು ಭಾಷಾಂತರಕಾರರಾದ ಜಯಪ್ರಕಾಶ್ ನಾರಾಯಣರವರು ಬಿಡುಗಡೆ ಮಾಡಿ ಮಾತನಾಡುತ್ತ, ಒಳಗೆ ತಳಮಳವಿಲ್ಲದ ಯಾವುದೇ ಸಾಹಿತಿ ಅಥವಾ ಕವಿ ಉತ್ತಮವಾದುದನ್ನು ಸೃಷ್ಟಿಸಲಾರ. ಮಹೇಶ್ ಭಾರದ್ವಾಜರ ಪ್ರತಿಯೊಂದು ಅಂಕಣ ಬರಹಗಳಲ್ಲಿ ಏಕತಾನತೆಗೆ ಬದಲಾಗಿ ವೈವಿಧ್ಯತೆ ಮತ್ತು ಜೀವನಾನುಭವಗಳ ಕಸುವು ತುಂಬಿದೆ ಎಂದು ಅಭಿಪ್ರಾಯಪಟ್ಟರು.

"ಅಂಗೈಲೊಂದು ಅನಾಮಿಕ ಚಿಟ್ಟೆ " ಕವನಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಹಾಸನದ ಪ್ರಮುಖ ಸಾಹಿತಿಗಳಾದ ಗೊರೂರು ಶಿವೇಶ್ ರವರು ಒಬ್ಬ ನೈಜ ಕವಿ ರೂಪಕಗಳ ಹುಡುಕಾಟದಲ್ಲಿ ಇರುತ್ತಾನೆ. ಮಹೇಶ್ ಭಾರದ್ವಾಜ್ ರವರು ಕೃಷಿಕರಾಗಿ ಪ್ರಕೃತಿಯ ಒಡನಾಟದಲ್ಲಿರುವ ಕಾರಣಕ್ಕೆ ಗಿಡ, ಮರ. ಹೂವು, ಎಲೆಗಳಲ್ಲೂ ಕಾವ್ಯದ ದನಿಯನ್ನು ಹೊರಡಿಸುವಲ್ಲಿ ಸಫಲರಾಗಿದ್ದಾರೆ. ಈ ಸಂಕಲನದಲ್ಲಿ ಸರಳ ರೂಪದ ಕವಿತೆಗಳಿರುವಂತೆಯೇ ಸಂಕೀರ್ಣ ಅಭಿವ್ಯಕ್ತಿ ಮಾರ್ಗದ ಕವಿತೆಗಳೂ ಇದ್ದು ರೂಪಕಗಳ ಬಳಕೆ ಸಹಜ ಸುಂದರವಾಗಿ ಮೇಳೈಸಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲೇಖಕರಾದ ಗೊರೂರು ಶಿವೇಶ್ ಮತ್ತು ಜಯಪ್ರಕಾಶ್ ನಾರಾಯಣ್ ರವರನ್ನು ಸನ್ಮಾನಿಸಲಾಯಿತು. ಹಳ್ಳಿಯ ಶಾಂತ ಪರಿಸರದ ನಡುವೆ ಸಾಹಿತ್ಯಾಸಕ್ತರ ಮುಂದೆ ನಡೆದ ಈ ಕಾರ್ಯಕ್ರಮದಲ್ಲಿ ಬೇಲೂರಿನ ಸಂಶೋಧಕರಾದ ಡಾ. ಶ್ರೀವತ್ಸ ವಟಿ, ಹಿರಿಯ ಸಾಹಿತಿಗಳಾದ ಶ್ರೀ ಡಿ. ಎಸ್. ರಾಮಸ್ವಾಮಿ, ಬೇಲೂರು ತಾಲ್ಲೂಕು ಕ. ಸಾ. ಪ ಅಧ್ಯಕ್ಷರಾದ ಮಾ. ನ. ಮಂಜೇಗೌಡ, ಪತ್ರಕರ್ತರಾದ ಶ್ರೀ ಹೆಬ್ಬಾಳು ಹಾಲಪ್ಪ, ಬೇಲೂರಿನ ಸಾಹಿತಿಗಳಾದ ಶ್ರೀಮತಿ ಪಲ್ಲವಿ, ಶ್ರೀಮತಿ ಮಧುಮಾಲತಿ ಶ್ರೀ ಕೆ. ಬಿ. ಮಾರುತಿ, ಶ್ರೀ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಮುಂತಾದವರು ಭಾಗಿಯಾಗಿದ್ದರು.