ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾಹಿತ್ಯವು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ಜಗದ ನೋವಿಗೆ ಕಿವಿಗೊಟ್ಟು, ಸಮಾಜದ ಕಣ್ಣೀರನ್ನು ಒರೆಸುವ ಶಕ್ತಿಯಾಗಿದೆ. ನೋವಿಗೆ ಸ್ಪಂದಿಸುವವನೇ ನಿಜವಾದ ಸಾಹಿತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು. ನಗರದ ಕುವೆಂಪು ನಗರದಲ್ಲಿರುವ ಹೇಮಾ ಅನಂತರವರ ರೆಡ್‌ರೋಜ್ ನಿವಾಸದಲ್ಲಿ ನಡೆದ 333ನೇ ಮನೆಮನೆ ಕವಿಗೋಷ್ಠಿಯಲ್ಲಿ ಲೇಖಕಿ ಸ.ವೆಂ. ಪೂರ್ಣಿಮಾರವರ "ಒಂದೆಲ ಮೇಲಿನ ಕಾಡು " ಕೃತಿಯನ್ನು ವಿಮರ್ಶೆ ಮಾಡುತ್ತಾ, ಸಾಹಿತ್ಯದಲ್ಲಿ ಸಂತೋಷಕ್ಕೆ ಒಂದೇ ಮುಖವಿದ್ದರೆ, ದುಃಖಕ್ಕೆ ಸಾವಿರಾರು ಮುಖಗಳಿವೆ. ಆದರೆ ಆ ನೋವಿನ ಹೂರಣಕ್ಕೆ ನಲಿವಿನ ಹೊದಿಕೆಯನ್ನು ನೀಡುವ ಪ್ರಕಾರವೇ ಲಲಿತ ಪ್ರಬಂಧ. ಪೂರ್ಣಿಮಾರವರ ಈ ಸಂಕಲನ ಒಂದು ಎಲೆಗೂ ತನ್ನದೇ ಆದ ಕಥೆ ಇರುವುದು ಎಂಬುದನ್ನು ನೆನಪಿಸುವಂತೆ, ಓದುಗರ ಮನಸ್ಸಿನ ಪರದೆಯ ಮೇಲೆ ಜೀವಂತ ಚಿತ್ರಗಳನ್ನು ಮೂಡಿಸುತ್ತದೆ ಎಂದರು. ಹಿರಿಯ ಸಾಹಿತಿಗಳಾದ ಚಂದ್ರಕಾಂತ ಪಡೆಸೂರ್ ಹಾಗೂ ಚೆನ್ನೇಗೌಡ ಅವರು ಕಳೆದ ೨೫ ವರ್ಷಗಳಿಂದ ಮನೆಮನೆ ಕವಿಗೋಷ್ಠಿ ನಿರಂತರವಾಗಿ ಸಾಗುತ್ತಿರುವುದನ್ನು ಶ್ಲಾಘಿಸಿದರು.ಸಂಚಾಲಕಿ ಸುಕನ್ಯಾ ಮುಕುಂದ ಅವರು ಮಾತನಾಡಿ, ಭವಿಷ್ಯದಲ್ಲಿ ಕವಿಗೋಷ್ಠಿಯ ಮೂಲಕ ಕವನ ಸಂಕಲನ ಹೊರತರಲು, ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಹಾಕುವುದಾಗಿ ತಿಳಿಸಿದರು. ಈ ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ತಮ್ಮ ಕಾವ್ಯವನ್ನು ವಾಚಿಸಿದರು. ವಾಚಿಸಲಾದ ಕವನಗಳಿಗೆ ಹಿರಿಯ ಸಾಹಿತಿಗಳಾದ ಚಂದ್ರಕಾಂತ ಪಡೆಸೂರ್, ಎಲ್.ಎನ್. ಚನ್ನೇಗೌಡ, ಸುಂದರೇಶ್ ಡಿ. ಉಡುವಾರೆ ಉತ್ತಮ ವಿಮರ್ಶೆ ನೀಡಿ ಕವಿಗಳಿಗೆ ಪ್ರೋತ್ಸಾಹ ನೀಡಿದರು. ಪ್ರಾಯೋಜಕತ್ವ ವಹಿಸಿಕೊಂಡ ಸ.ವೆಂ. ಪೂರ್ಣಿಮಾರವರು ತಮ್ಮ ಕೃತಿಯನ್ನು ಮನೆಮನೆ ಕವಿಗೋಷ್ಠಿಯಲ್ಲಿ ವಿಮರ್ಶೆ ಮಾಡಿದ್ದರಿಂದ ಸಂತೋಷ ವ್ಯಕ್ತಪಡಿಸಿ, ತಮ್ಮ ಬರವಣಿಗೆಗೆ ಪ್ರೋತ್ಸಾಹ ನೀಡಿದವರಿಗೆ ಧನ್ಯವಾದ ಅರ್ಪಿಸಿದರು.ಸಾವಯವ ಕೃಷಿಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ರೈತ ಮಹಿಳೆ ಹೇಮಾ ಅನಂತ ತಮ್ಮ ನಿವಾಸದಲ್ಲಿ ಕವಿಗೋಷ್ಠಿ ನಡೆದಿರುವುದು ನನ್ನ ಭಾಗ್ಯವೆಂದು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ರುದ್ರಪ್ಪಾಜಿ, ಮುಕುಂದ ಎಂ., ಮಹೇಶ್ ಎಚ್.ಆರ್., ಅನಂತ ರಾಜ್, ಚಿರಂತ್ ಆರ್. ಉಪಸ್ಥಿತರಿದ್ದರು. ಗಿರಿಜಾ ನಿರ್ವಾಣಿ ಕಾರ್ಯಕ್ರಮವನ್ನು ನಿರೂಪಿಸಿದರು, ವಾಣಿ ಮಹೇಶ್ ಸ್ವಾಗತಿಸಿದರು ಹಾಗೂ ಜಯಶಂಕರ ಬೆಳಗುಂಬ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಡಿವಿಜಿಯವರ "ಮಂಕುತಿಮ್ಮನ ಕಗ್ಗ "ಗಳ ಕಾವ್ಯವಾಚನದ ಮೂಲಕ ದಿಬ್ಬೂರು ರಮೇಶ್ ಕಾವ್ಯಾತ್ಮಕವಾಗಿ ಉದ್ಘಾಟಿಸಿದರು. ಈ ಹಿಂದೆ ಮನೆಮನೆ ಕವಿಗೋಷ್ಠಿಗೆ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಸಕಿನಾ ಬೇಗಂ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆಯನ್ನೂ ಕೈಗೊಳ್ಳಲಾಯಿತು.ಕಾರ್ಯಕ್ರಮದಲ್ಲಿ ದಿಬ್ಬೂರು ರಮೇಶ್, ಎನ್.ಎಲ್. ಚನ್ನೇಗೌಡ, ರೇಖಾ ಪ್ರಕಾಶ್, ಎಚ್.ಎನ್. ಭಾರತಿ, ಸೌಮ್ಯ ಪ್ರಸಾದ್, ನಾಗೇಂದ್ರ ಪ್ರಸಾದ್ ಕೆ.ವಿ., ಲಲಿತಾ ಎಸ್., ಜಯಾ ರಮೇಶ್, ಸುಂದರೇಶ್ ಡಿ. ಉಡುವಾರೆ, ಜೆ.ಆರ್. ರವಿಕುಮಾರ್ ಜನಿವಾರ, ಚಲಂ ಹಾದ್ಲಹಳ್ಳಿ, ಬಿ.ಎಂ. ಭಾರತಿ ಹಾದಿಗೆ, ಡಾ. ಶಾಂತ ಅತ್ನಿ, ಸಿ.ಎಸ್. ತಿಮ್ಮೇಗೌಡ, ಗಿರಿಜಾ ನಿರ್ವಾಣಿ, ಚಿದಾನಂದ ಕೆ.ಎನ್., ಭವ್ಯ ನವೀನ್, ಜಿ.ಎಸ್. ಕಲಾವತಿ ಮಧುಸೂದನ್ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))