ವಿಶಿಷ್ಟವಾಗಿ ಜರುಗಿದ ಓಕುಳಿ

| Published : Mar 27 2024, 01:02 AM IST

ಸಾರಾಂಶ

ಒಬ್ಬರಿಗೊಬ್ಬರು ಪರಸ್ಪರ ಓಕುಳಿ ಎರಚಾಡುತ್ತಾ ಪಲ್ಲಕ್ಕಿಯೊಂದಿಗೆ ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಿದರು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದಲ್ಲಿ ಹೋಳಿಹುಣ್ಣಿಮೆ ಪ್ರಯುಕ್ತ ಶ್ರೀರುಕ್ಮಿಣಿ ಪಾಂಡುರಂಗದೇವರ ಜಾತ್ರೆಯ ಅಂಗವಾಗಿ ಶ್ರೀರುಕ್ಮಿಣಿ ಪಾಂಡುರಂಗ ದೇವಸ್ಥಾನ ವಿಶ್ವಸ್ಥ ಮಂಡಳಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅವಭೃತ ಸ್ನಾನ, ಪಲ್ಲಕ್ಕಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬ್ರಾಹ್ಮಣ ಮತ್ತು ವೈಶ್ಯ ಸಮಾಜದವರಿಂದ ಓಕುಳಿ ಆಡುವ ಕಾರ್ಯಕ್ರಮ ಮಂಗಳವಾರ ವಿಶಿಷ್ಟವಾಗಿ ಜರುಗಿತು.

ಓಕುಳಿ ಮೆರವಣಿಗೆಯ ಪಲ್ಲಕ್ಕಿಯಲ್ಲಿ ಸಾಗುವ ಪಾಂಡುರಂಗ ಹಾಗೂ ರುಕ್ಮಿಣಿ ದೇವರ ಉತ್ಸವ ಮೂರ್ತಿಗಳಿಗೆ ಬೆಳಗ್ಗೆ ದೇವಸ್ಥಾನದಲ್ಲಿ ಅವಭೃತ ಸ್ನಾನ ಮಾಡಿಸಿದ ಬಳಿಕ ಓಕುಳಿಗೆ ಚಾಲನೆ ನೀಡಲಾಯಿತು. ಒಬ್ಬರಿಗೊಬ್ಬರು ಪರಸ್ಪರ ಓಕುಳಿ ಎರಚಾಡುತ್ತಾ ಪಲ್ಲಕ್ಕಿಯೊಂದಿಗೆ ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಿದರು. ಮಕ್ಕಳು, ಯುವಕರು, ಹಿರಿಯರೂ ಓಕುಳಿಯಲ್ಲಿ ಮಿಂದೆದ್ದರು.

ಚಿಕ್ಕ ಮಕ್ಕಳು ಕೂಡಾ ಪರಸ್ಪರ ಬಣ್ಣ ಎರಚಿಕೊಂಡು ಸಂತಸಪಟ್ಟರು.

ಅಭಿನವ ತಿರುಪತಿ ಎಂದು ಖ್ಯಾತಿಯಾದ ಹನುಮಸಾಗರದಲ್ಲಿ ಬೆಟ್ಟದ ಮೇಲಿರುವ ಶ್ರೀವೆಂಕಟೇಶ್ವರ ದೇವಸ್ಥಾನದ ರೂವಾರಿಯಾಗಿದ್ದ ದೇಸಾಯಿಯವರಿಗೆ ಸ್ವಪ್ನವಾಗಿ ರುಕ್ಮಿಣಿ ಪಾಂಡುರಂಗ ದೇವಸ್ಥಾನ ಕಟ್ಟಿಸಿ ಹೋಳಿಹುಣ್ಣಿಮೆಯಂದು ಜಾತ್ರೆ ಮಾಡಲು ಆದೇಶವಾಯಿತು. ಅದರಂತೆ ಅನಾದಿ ಕಾಲದಿಂದಲೂ ಈ ಜಾತ್ರೆ ನಡೆಯುತ್ತಿದ್ದು, ಕಾಮದಹನ ಮುಂತಾದ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ರಥೋತ್ಸವದ ಮರುದಿನ ದೇವರಿಗೆ ಅವಭೃತ ಸ್ನಾನ ಮಾಡಿಸಿ ಅದೇ ಓಕುಳಿಯನ್ನು ಒಬ್ಬರಿಗೊಬ್ಬರು ಎರಚುತ್ತಾರೆ ಎಂದು ಹಿರಿಯರು ಹೇಳಿದರು.

ಧಾರ್ಮಿಕ ಪದ್ಧತಿಯಂತೆ ವಿವಿಧ ಬಡಾವಣೆಗಳಲ್ಲಿ ದೇವರ ಪಲ್ಲಕ್ಕಿ ಸಂಚರಿಸುವ ಸಂದರ್ಭದಲ್ಲಿ ಹೆಂಗಳೆಯರು ಪಲ್ಲಕ್ಕಿಗೆ ನೀರು ಹಾಕಿ ಸ್ವಾಗತಿಸಿಕೊಂಡು ಉತ್ಸವ ಮೂರ್ತಿಗೆ ಆಯಾ ಕುಟುಂಬಗಳ ಸದಸ್ಯರು ಮಂಗಳಾರತಿ ಹಾಗೂ ನೈವೇದ್ಯ ನೀಡಿದರು.

ಸಮಾಜದ ಮುಖಂಡರು, ಯುವಕರು, ವಿದ್ಯಾರ್ಥಿಗಳು ಈ ಅವಭೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಪಂ.ಧೀರೇಂದ್ರಾಚಾರ್ಯ ಪೂಜಾರ, ಗುರಾಚಾರ್ಯ ಪೂಜಾರ, ಸುಬ್ಬಣ್ಣಾಚಾರ್ಯ ಕಟ್ಟಿ, ಪ್ರಹ್ಲಾದಾಚಾರ್ಯ ಪೂಜಾರ, ಮಧು ಪೂಜಾರ, ಮುರಲಿ ಪೂಜಾರ, ಕೃಷ್ಣಮೂರ್ತಿ ದೇಸಾಯಿ, ಪ್ರಹ್ಲಾದ ಕಟ್ಟಿ, ಶ್ರೀನಿವಾಸ ಜಹಗೀರದಾರ, ವಿಜಯೀಂದ್ರ ಕುಲಕರ್ಣಿ, ಅಕ್ಷಯ ಕಟ್ಟಿ, ವಾದಿರಾಜ ಆಶ್ರೀತ, ಸುಮಂತ ಪುರಾಣಿಕ, ರಾಮರಾವ ಪ್ಯಾಟಿ, ವಿಜಯೀಂದ್ರ ಆಶ್ರೀತ, ಬದರಿ ಪುರೋಹಿತ, ಪ್ರಾಣೇಶ ಪಪ್ಪು, ಗಿರೀಶ ಪಟವಾರಿ, ಗುರಾಚಾರ್ಯ ಕೊಳ್ಳಿ, ಲಕ್ಷ್ಮಣರಾವ ಕುಲಕರ್ಣಿ, ರಾಘವೇಂದ್ರ ಪುರೋಹಿತ, ರಾಮು ಕೊಳ್ಳಿ, ಭೀಮಸೇನಾಚಾರ್ಯ ಪುರಾಣಿಕ, ಪಾಂಡುರಂಗಾಚಾರ್ಯ ಪಪ್ಪು ಮತ್ತಿತರರಿದ್ದರು.