ಕನ್ನಡ ಎಲ್ಲ ಸಾಹಿತ್ಯ ಪ್ರಕಾರ ಓದಿಸಿಕೊಂಡು ಹೋಗುತ್ತವೆ. ಲೌಕಿಕ ಸಾಹಿತ್ಯ ಹಿನ್ನೆಲೆ ಕಾವ್ಯ ರಚಿಸಿದ ಆದಿ ಕವಿ ಪಂಪನಿಂದ ಹಿಡಿದು ರನ್ನ,ಕುಮಾರವ್ಯಾಸರಾದಿಯಾಗಿ ಅನೇಕರು ಕನ್ನಡದ ಕಟ್ಟಾಳುಗಳಾಗಿದ್ದವರು
ಕೊಟ್ಟೂರು: ಜಗತ್ತಿನ ಎಲ್ಲ ಭಾಷೆಗಳಿಗಿಂತ ಎರಡು ಸಾವಿರ ವರ್ಷದ ಇತಿಹಾಸ ಹೊಂದಿರುವ ಕನ್ನಡ ಭಾಷೆ ವಿಶೇಷವಾಗಿದೆ ಎಂದು ಹರಪನಹಳ್ಳಿ ಎಸ್ಯುಜೆಎಂ ಪಿಯು ಕಾಲೇಜು ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಡಾ. ಎಚ್.ಜಿ. ರಾಜ್ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.ಪ್ರಾಚೀನತೆಯಲ್ಲಿ ಮೂರನೇ ಸ್ಥಾನ ಹೊಂದಿರುವ ಕನ್ನಡ ಭಾಷೆ ಎಂದಿಗೂ ಅಳಿಯಲಾಗದ ಭಾಷೆಯಾಗಿದೆ. ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಯಾವುದೇ ಭಾಷೆಗಳಲ್ಲಿ ರಗಳೆ ಸಾಹಿತ್ಯ ಇಲ್ಲ. ಸಾಹಿತ್ಯ ಕ್ಷೇತ್ರದ ಉನ್ನತ ಪ್ರಶಸ್ತಿ ಎನಿಸಿರುವ ಜ್ಞಾನಪೀಠ ಪ್ರಶಸ್ತಿ ಕನ್ನಡದ ಎಂಟು ಸಾಹಿತಿಗಳಿಗೆ ಲಭಿಸಿರುವುದು ನಮ್ಮ ಭಾಷೆಗೆ ಮಾತ್ರ. ಶಿಕ್ಷಣ ಮಾಧ್ಯಮ ಯಾವುದೇ ಇದ್ದರೂ ಮನೆಯಲ್ಲಿ ತಪ್ಪದೇ ಕನ್ನಡದಲ್ಲಿಯೇ ಮಾತಾಡಿ ವ್ಯವಹರಿಸಬೇಕು.ಆಂಗ್ಲ ಮಾಧ್ಯಮ ಕಲಿಕೆ ಇಂದು ಹೆಚ್ಚು ಒತ್ತು ನೀಡಲಾಗಿದೆಯಾದರೂ ಅಲ್ಲಿನ ಶಿಕ್ಷಣದಲ್ಲಿ ಎಂದಿಗೂ ಸಂಸ್ಕಾರ, ಸಂಸ್ಕೃತಿ ಪಾಠ ಮಕ್ಕಳಿಗೆ ಸಿಗುವುದಿಲ್ಲ. ಇದೇ ಕಾರಣಕ್ಕೆ ಆಂಗ್ಲ ಮಾಧ್ಯಮದಲ್ಲಿ ಕಲಿತ ಮಕ್ಕಳಿಂದಲೇ ಹೆಚ್ಚು ತಂದೆ ತಾಯಿಗಳ ನಿರ್ಲಕ್ಷಕ್ಕೊಳಗಾಗಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಟ್ಟೂರು ಹಿರೇಮಠದ ಶ್ರೀಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿ, ಕನ್ನಡ ಎಲ್ಲ ಸಾಹಿತ್ಯ ಪ್ರಕಾರ ಓದಿಸಿಕೊಂಡು ಹೋಗುತ್ತವೆ. ಲೌಕಿಕ ಸಾಹಿತ್ಯ ಹಿನ್ನೆಲೆ ಕಾವ್ಯ ರಚಿಸಿದ ಆದಿ ಕವಿ ಪಂಪನಿಂದ ಹಿಡಿದು ರನ್ನ,ಕುಮಾರವ್ಯಾಸರಾದಿಯಾಗಿ ಅನೇಕರು ಕನ್ನಡದ ಕಟ್ಟಾಳುಗಳಾಗಿದ್ದವರು. ಬೆಂಗಳೂರು ನಿರ್ಮಾಣಕ್ಕೆ ಹಂಪಿಯ ವಿಜಯನಗರ ಸಾಮ್ರಾಜ್ಯ ಮಾದರಿಯಾಗಿತ್ತು.ಈ ನಾಡಿನಲ್ಲಿ ಸಾಹಿತ್ಯಕ್ಕೆ ದೊಡ್ಡ ಪ್ರೋತ್ಸಾಹವೇ ಸಿಗುತ್ತಿತ್ತು. ಕೊಟ್ಟೂರು ಸಾಂಸ್ಕೃತಿಕ ಹಿನ್ನೆಲೆ ಪಟ್ಟಣವಾಗಿದೆ. ಇಲ್ಲಿ ವಿದ್ಯಾಭಾಸ ಮಾಡಿದ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಕೊಟ್ಟೂರು ತಾಲೂಕು ಕಸಾಪ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮ ನಡೆಸಿ ಇತರೆ ತಾಲೂಕಿಗೆ ಮಾದರಿಯಾಗಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿಯೇ ಕೊಟ್ಟೂರು ತಾಲೂಕು ಅತೀ ಹೆಚ್ಚು ದಾನಿಗಳಿಂದ ದತ್ತಿ ಸ್ಥಾಪಿಸಿದೆ. ಕನ್ನಡ ಭವನ ನಿರ್ಮಾಣ ಕನಸು ಹತ್ತಿರವಾಗುತ್ತಲೇ ಅವು ಪೂರ್ಣಗೊಂಡಿದೆ. ಮುಂಬರುವ ಪರಿಷತ್ ಅಧ್ಯಕ್ಷರು ನಿರ್ಮಾಣ ಕಾರ್ಯಭಾರ ಪೂರ್ಣಗೊಳಿಸಲು ಎಲ್ಲ ಸಹಕಾರ ನೀಡುತ್ತೇವೆ. ನನ್ನೊಂದಿ ಪದಾಧಿಕಾರಿಗಳಾಗಿದ್ದ ಎಲ್ಲರೂ ಅವಿರತವಾಗಿ ಕೈ ಜೋಡಿಸಿ ಪರಿಷತ್ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದು ಸ್ಮರಿಸಿದರು.ಶಿಕ್ಷಕಿ ಪದ್ಮಾ ಜಾಗಟಗೇರಿ ಜಲಕನ್ಯೆ ಕವನ ಸಂಕಲನ ಬಿಡುಗಡೆಗೊಳಿಸಿದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ. ಶಿವಾನಂದ, ಅತಿಥಿಗಳಾಗಿದ್ದ ಬಿಜೆಪಿ ಮುಖಂಡ ಅಂಗಡಿ ಪಂಪಾಪತಿ, ವೈದ್ಯ ಡಾ. ಬಿ.ಸಿ. ಮೂಗಪ್ಪ, ಲೇಖಕಿ ಪದ್ಮಾ ಜಾಗಟಗೇರಿ ಮಾತನಾಡಿದರು.ಕಸಾಪ ಕಾರ್ಯದರ್ಶಿ ಅರವಿಂದ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ಪ್ರಾಧ್ಯಾಪಕ ಸತೀಶ್ ಪಾಟೀಲ್, ಶಿಕ್ಷಣ ಸಂಸ್ಥೆಗಳ ಬಿ. ಪಂಪಾಪತಿ, ಪಿ.ಶ್ರೀಧರಶೆಟ್ಟಿ, ಕೆ.ವಿವೇಕಾನಂದ, ಎಂ. ಅಂಜಿನಪ್ಪ, ಕಸಾಪ ಪದಾಧಿಕಾರಿ ಎಸ್.ರಾಜಣ್ಣ, ಕೊಟ್ರಯ್ಯ, ರಾಜೇಂದ್ರಗೌಡ, ಬಿ.ಎಂ.ಗಿರೀಶ, ಶೆಟ್ಟಿ ಶಶಿಕಲಾ, ಧನಂಜಯ ಇತರರು ಇದ್ದರು.
ನಿವೃತ್ತ ಯೋಧ ಶೆಟ್ಟಿ ರಾಜಶೇಖರ, ಪತ್ರಿಕಾ ವಿತರಕ ಡಿ.ಮಲ್ಲಿಕಾರ್ಜುನ, ಬಂದಾತರ ಪ್ರಕಾಶ್, ಅಪ್ಪು ಅಭಿಮಾನಿ ಬಳಗದ ರಾಂಪುರ ಪ್ರಕಾಶ್, ಸಮಾಜ ಸೇವಕ ಬಿಪಿ ಮದನ್, ಪೌರ ಕಾರ್ಮಿಕ ಬಿ.ಶಿವಕುಮಾರ ಇವರನ್ನು ಸನ್ಮಾನಿಸಲಾಯಿತು. ನೃತ್ಯ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಕಸಾಪದ ಎಚ್.ಎನ್. ಪ್ರಭಾಕರ, ಭೀಮಣ್ಣ ಕಂದಗಲ್, ಈಶ್ವರಪ್ಪ ತುರಕಾಣಿ ನಿರ್ವಹಿಸಿದರು.