ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. ಮೇಲ್ವರ್ಗಗಳಲ್ಲಿಯೂ ಬಡವರಿದ್ದು, ಹಿಂದುಳಿದವರು ಹಾಗೂ ದಲಿತರ ಹೆಸರಿನಲ್ಲಿ ಕೆಲವರು ದುರುಪಯೋಗ ಪಡೆದುಕೊಂಡು ವೈಯಕ್ತಿಕ ಲಾಭ ಮಾಡಿಕೊಂಡಿರುವುದು ಸರಿಯಲ್ಲ.
ಹುಬ್ಬಳ್ಳಿ:
ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಬೇಕಾದರೆ ಜಾತಿ ಹಾಗೂ ವ್ಯಕ್ತಿ ಕೇಂದ್ರಿತ ಚರ್ಚೆಗಳನ್ನು ಬದಿಗಿಟ್ಟು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಚಿಂತನೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳ ನಾಯಕರು ಮತ್ತು ನಾಯಕತ್ವ ಉಳಿವಿಗಾಗಿ ನಡೆದ ಮಠಾಧೀಶರ ಚಿಂತನ-ಮಂಥನ ಸಭೆ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು. ಮೇಲ್ವರ್ಗಗಳಲ್ಲಿಯೂ ಬಡವರಿದ್ದು, ಹಿಂದುಳಿದವರು ಹಾಗೂ ದಲಿತರ ಹೆಸರಿನಲ್ಲಿ ಕೆಲವರು ದುರುಪಯೋಗ ಪಡೆದುಕೊಂಡು ವೈಯಕ್ತಿಕ ಲಾಭ ಮಾಡಿಕೊಂಡಿರುವುದು ಸರಿಯಲ್ಲ ಎಂದರು.ಜಾತಿಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ತಮ್ಮ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಿದೆ. ಚುನಾವಣೆ ಸಂದರ್ಭದಲ್ಲಿ ಜಾತಿಯ ಉದ್ಧಾರ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರೂ ದಲಿತ ಹಾಗೂ ಹಿಂದುಳಿದ ಸಮಾಜಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. ಹೀಗಾಗಿ ಜಾತಿಯನ್ನು ಬದಿಗಿಟ್ಟು ಸಾಮಾಜಿಕ ನ್ಯಾಯದ ಕುರಿತು ಚರ್ಚೆ ನಡೆಯಬೇಕು ಎಂದು ಈಶ್ವರಪ್ಪ ಹೇಳಿದರು.
ಸಮಾಜದಲ್ಲಿ ಪರಿವರ್ತನೆ ಅಗತ್ಯವಿದ್ದು, ದೇಶದ ರಕ್ಷಣೆಯಲ್ಲಿ ಸಾಧು-ಸಂತರ ನೇತೃತ್ವ ಮಹತ್ವದ್ದಾಗಿದೆ. ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಮಠ-ಮಾನ್ಯಗಳನ್ನು ಉಳಿಸಿಕೊಳ್ಳಬೇಕು ಎಂದ ಅವರು, ಸಮಾಜಗಳು ಸಾಧು-ಸಂತರನ್ನು ಮರೆಯುತ್ತಿರುವುದು ವಿಷಾದನೀಯ ಎಂದರು.ಸರ್ಕಾರ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸಬೇಕು. ಮುಂದಿನ ಸಭೆಗೆ ಸರ್ಕಾರದ ಪ್ರತಿನಿಧಿಗಳನ್ನು ಆಹ್ವಾನಿಸಿ ಚರ್ಚೆ ನಡೆಸಲಾಗುವುದು ಎಂದ ಈಶ್ವರಪ್ಪ, ಮುಂದಿನ ಸಭೆ ಬಾಗಲಕೋಟೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರ ಮಾತನಾಡಿ, ಸಂಘಟನಾತ್ಮಕ ಹೋರಾಟ ನಡೆಸದೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಟ್ಟುಕೊಳ್ಳಬಾರದು. ಹಿಂದುಳಿದ ವರ್ಗಗಳ ಸಮಾಜಗಳು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಹಾಸ್ಟೆಲ್‌ಗಳಿಂದ ಸುಮಾರು ಒಂದೂವರೆ ಲಕ್ಷ ಮಕ್ಕಳು ಹೊರಗಿದ್ದು, ಈ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದರು.11 ಸಮುದಾಯಗಳಿಗೆ ನಿಗಮಗಳನ್ನು ರಚಿಸಲಾಗಿದ್ದರೂ ಅಗತ್ಯ ಅನುದಾನ ದೊರೆಯುತ್ತಿಲ್ಲ. ಸಭೆಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಬೇಕು ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ಕೆ. ಮುಕುಡಪ್ಪ, ಶಶಿಕುಮಾರ ಮೆಹರವಾಡೆ ಹಾಗೂ ವೆಂಕಟೇಶ ಕಾಟವೆ ಮಾತನಾಡಿದರು. ಯಾದಗಿರಿಯ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಜಗುರುಸ್ವಾಮೀಜಿ, ರಾಘವೇಂದ್ರ ಗುರೂಜಿ, ಕಲಬುರ್ಗಿಯ ಭಗೀರಥಾನಂದಪುರಿ ಶ್ರೀ, ಗುರುರಾಜೇಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ವೀರಣ್ಣ ಹಳೆಗೌಡರ, ಶಶಿಕುಮಾರ ಮೆಹರವಾಡೆ, ದೇವರಾಜ ಕಂಬಳಿ, ಪಾಂಡುರಂಗ ಪಮ್ಮಾರ, ರಾಜು ನಾಯಕವಾಡಿ, ರಮೇಶ ಮಹಾದೇವಪ್ಪನವರ, ಬಾಳು ಮಗಜಿಕೊಂಡಿ, ಲಕ್ಷ್ಮಣ ಗಂಡಗಾಳೇಕರ್ ಸೇರಿ ಹಲವರಿದ್ದರು.