ಕಟ್ಟಡ ಕಾರ್ಮಿಕರ ಹಕ್ಕು ಹಾಗೂ ಸೌಲಭ್ಯ ಪಡೆಯಲು ಸಾಂಘಿತ ಹೋರಾಟ ಅಗತ್ಯ: ಬಾಲಕೃಷ್ಣಶೆಟ್ಟಿ

| Published : Aug 05 2025, 12:30 AM IST

ಕಟ್ಟಡ ಕಾರ್ಮಿಕರ ಹಕ್ಕು ಹಾಗೂ ಸೌಲಭ್ಯ ಪಡೆಯಲು ಸಾಂಘಿತ ಹೋರಾಟ ಅಗತ್ಯ: ಬಾಲಕೃಷ್ಣಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರು ತಮ್ಮಲಿನ ಭಿನ್ನಾಭಿಪ್ರಾಯ ಬಿಡಬೇಕು. ಸಂಘಟಿತರಾಗುವ ಜೊತೆಗೆ ನಕಲಿ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಆ.24 ಮತ್ತು 25 ರಂದು ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಮಾಡುವ ಮೂಲಕ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಮುಂದೆ ಇಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಕಟ್ಟಡ ಕಾರ್ಮಿಕರು ತಮ್ಮ ಪಾಲಿನ ಹಕ್ಕುಗಳು ಹಾಗೂ ಸೌಲಭ್ಯ ಪಡೆಯಬೇಕಾದರೆ ಸಾಂಘಿಕ ಹೋರಾಟ ಅಗತ್ಯವಿದೆ ಎಂದು ಸಿಡಬ್ಲ್ಯೂಎಫ್ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.

ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ 4ನೇ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕರು ತಮ್ಮಲಿನ ಭಿನ್ನಾಭಿಪ್ರಾಯ ಬಿಡಬೇಕು. ಸಂಘಟಿತರಾಗುವ ಜೊತೆಗೆ ನಕಲಿ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ ಆ.24 ಮತ್ತು 25 ರಂದು ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಮಾಡುವ ಮೂಲಕ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಮುಂದೆ ಇಡಲಾಗುವುದು ಎಂದರು.

3 ವರ್ಷಕ್ಕೊಮ್ಮೆ ಸಮ್ಮೇಳನಗಳನ್ನು ಮಾಡಿ ಸಮಸ್ಯೆಗಳನ್ನು ತಿಳಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಕಟ್ಟಡ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಣಿಯಾಗುವ ಮೂಲಕ ಸಲವತ್ತು ಪಡೆದುಕೊಳ್ಳಬೇಕು ಎಂದರು.

ಕಾರ್ಮಿಕರ ಹೋರಾಟ ಫಲವಾಗಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3 ಸಾವಿರ ಕುಟುಂಬ ಪಿಂಚಣಿ ಸೌಲಭ್ಯದಿಂದ ಮೃತ ಪಂಚಣಿದಾರರ ಪತಿ ಅಥವಾ ಪತ್ನಿಗೆ ಮಾಸಿಕ 2 ಸಾವಿರ ರು, ದುರ್ಬಲತೆ ಪಿಂಚಣಿಯಿಂದ ನೋಂದಾಯಿತ ಫಲಾನುಭವಿಗಳಿಗೆ ಕಾಯಿಲೆಯಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2 ಸಾವಿರ ಪಿಂಚಣಿ ಹಾಗೂ ಶೇ. ದುರ್ಬಲತೆ ಆಧರಿಸಿ 2 ಲಕ್ಷ ರು. ಸಹಾಯಧನ ಸೇರಿದಂತೆ ಹಲವು ಸೌಲಭ್ಯಗಳು ಸರ್ಕಾರದಿಂದ ಸಿಗುತ್ತಿದೆ ಎಂದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ ಮಾತನಾಡಿ, ಕಾರ್ಮಿಕರಲ್ಲಿ ಲಿಂಗ ತಾರತಮ್ಯ ಮತ್ತು ವೇತನ ತಾರತಮ್ಯ ಇರಬಾರದು. ಮಹಿಳಾ ಕಾರ್ಮಿಕರನ್ನು ಗೌರವಿಸುವ ಕೆಲಸದ ಜೊತೆಗೆ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಗೃಹದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಎರಡು ಲಕ್ಷದವರೆಗಿನ ಚಿಕಿತ್ಸೆಗೆ ಸಹಾಯಧನ ದೊರೆಯುತ್ತಿದೆ ಆರೋಗ್ಯ ಸಂಜೀವಿನಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು ಎಂದರು.

ಸಮ್ಮೇಳನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶೈಷಣಿಕ ಧನ ಸಹಾಯ ಬಿಡುಗಡೆ, ಆರೋಗ್ಯ ಸಂಜೀವಿನಿ ಜಾರಿಗೆ, ಮನೆ ನಿರ್ಮಾಣಕ್ಕೆ 3 ಲಕ್ಷ ರು. ಧನ ಸಹಾಯ ಬಿಡುಗಡೆ ಹಾಗೂ ಬಾಕಿ ಇರುವ ಮದುವೆ, ವೈದ್ಯಕೀಯ, ಮರಣ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

ಸಮ್ಮೇಳನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 300ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಿದರು.

ಸಿಡಬ್ಲ್ಯೂಎಫ್ಐ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಂಜುಳಾ, ತಾಲೂಕು ಕಾರ್ಯದರ್ಶಿ ವಿ.ಶಿವಕುಮಾರ್, ಖಜಾಂಚಿ ಸಿ.ಡಿ.ಆನಂದ್, ಮುಖಂಡರಾದ ಕುಮಾರ್, ಕೆಂಪುಶೆಟ್ಟಿ, ತಿಮ್ಮಶೆಟ್ಟಿ, ಬಸವರಾಜು, ದೊರೆ, ಆರ್ಮುಗಂ, ಜಗದೀಶ್, ರಾಮಕೃಷ್ಣ, ರಾಜು, ಸ್ವಾಮಿ, ಪ್ರಭು ಇದ್ದರು.