ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪೊಲಿಯೋ ನಿರ್ಮೂಲನೆಗೆ ಒಕ್ಕೊರಲ ದನಿ ಅಗತ್ಯವೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದಲ್ಲಿ ಪೋಲಿಯೊ ಮುಕ್ತ ವಾತಾವರಣ ನಿರ್ಮಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಮ್ಮಿಕೊಳ್ಳುತ್ತಿರುವ ಪಲ್ಸ್ ಪೋಲಿಯೊ ಅಭಿಯಾನವು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ ಎಂದರು.

ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಬೃಹತ್ ಲಸಿಕಾ ಅಭಿಯಾನದ ಮೂಲಕ ಹುಟ್ಟಿದ ಹಸುಗೂಸಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಬೇಕು. ಈ ಮೂಲಕ ಮಾರಕವಾಗಿರುವ ಪೋಲಿಯೊ ವೈರಸ್‍ನಿಂದ ಮಕ್ಕಳನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳೊಂದಿಗೆ ಅನೇಕ ಸಂಘ-ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಲಸಿಕಾ ಕೇಂದ್ರಕ್ಕೆ ಬಂದು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದರ ಜೊತೆಗೆ, ಪೋಷಕರು ತಮ್ಮ ಸುತ್ತಮುತ್ತಲಿನ ನೆರೆಹೊರೆಯವರಿಗೂ ಹಾಗೂ ಪರಿಚಿತ ಕುಟುಂಬದವರಿಗೂ ಪೋಲಿಯೋ ಲಸಿಕೆಯ ಮಹತ್ವ ತಿಳಿಸಬೇಕು. ಪಲ್ಸ್ ಪೋಲಿಯೊ ಜಾಗೃತಿಯ ರಾಯಭಾರಿಗಳಾಗಿ ಕೆಲಸ ಮಾಡಬೇಕು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಸಮಗ್ರ ಆರೋಗ್ಯಕ್ಕಾಗಿ ‘ಮಿಷನ್ ಇಂದ್ರಧನುಷ್'''''''' ಯೋಜನೆಯಡಿ ಏಳು ಪ್ರಮುಖ ರೋಗಗಳ ವಿರುದ್ಧ ಲಸಿಕೆಯನ್ನು ನೀಡುತ್ತಿವೆ. ಈ ಎಲ್ಲಾ ಲಸಿಕೆಗಳನ್ನು ಪೋಷಕರು ಕಾಲಕಾಲಕ್ಕೆ ಮಕ್ಕಳಿಗೆ ಕೊಡಿಸುವ ಮೂಲಕ ಅವರನ್ನು ಆರೋಗ್ಯವಂತ ಶಿಶುಗಳನ್ನಾಗಿಸಬೇಕು. ದೇಶದ ಸತ್ಪ್ರಜೆಗಳನ್ನಾಗಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ತಾಯಿ-ತಂದೆಯರ ಮೇಲಿದೆ ಎಂದು ಹೇಳಿದರು.

ಭಾರತವು ಕಳೆದ 15 ವರ್ಷದಿಂದ ಪೋಲಿಯೊ ಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾಗಿದ್ದು, ಪೋಲಿಯೊ ವೈರಸ್ ಇಂದಿಗೂ ಜಗತ್ತಿನಾದ್ಯಂತ ವಿಶ್ವದ ಹಲವು ದೇಶಗಳನ್ನು ಬಾದಿಸುತ್ತಿದೆ. ಇದರಲ್ಲಿ ಭಾರತದ ನೆರೆಯ ದೇಶಗಳು ಸೇರಿರುವುದು ಭಾರತಕ್ಕೆ ಆತಂಕದ ವಿಚಾರವಾಗಿದೆ. ಪಾಕಿಸ್ತಾನ ಹಾಗೂ ಅಪಘಾನಿಸ್ತಾನ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ವರದಿಯಾಗಿರುವುದಿಂದ ಈ ದೇಶಗಳ ಮೂಲಕ ಭಾರತಕ್ಕೆ ಪೋಲಿಯೋ ವೈರಸ್ ಹರಡುವ ಸಾಧ್ಯತೆ ಇದೆ. ಪೋಲಿಯೊ ಮುಕ್ತ ಭಾರತದ ಸ್ಥಿತಿ ಮುಂದುವರಿಸಿಕೊಂಡು ಹೋಗಲು ಮುಂಜಾಗ್ರತಾ ದೃಷ್ಠಿಯಿಂದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಾಶೀ ಮಾಹಿತಿ ನೀಡಿದರು.

ಜೂನ್ 28ರಂದು ಪೋಲಿಯೋ ಬೂತ್‍ಗಳಲ್ಲಿ ಪೋಲಿಯೊ ಲಸಿಕೆ ನೀಡಲಾಗುವುದು. ನಂತರದ ಮೂರು ದಿನ ಜೂನ್ 29, 30 ಮತ್ತು ಜುಲೈ 01ರಂದು ಮನೆ ಮನೆ ಭೇಟಿ ನೀಡಿ ಬೂತ್‍ಗಳಲ್ಲಿ ಲಸಿಕೆ ಪಡೆಯದೇ ಇರುವ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪಲ್ಸ್ ಪೋಲಿಯೋ ಕ್ರಿಯಾ ಯೋಜನೆಯಂತೆ 1085 ಪೋಲಿಯೊ ಬೂತ್‍ಗಳು, 1162 ಲಸಿಕಾ ತಂಡಗಳು, 2324 ಲಸಿಕಾಕಾರರಿಂದ, 235 ಮೇಲ್ವಿಚಾರರನ್ನು ಒಳಗೊಂಡ ಒಟ್ಟು 1,42,851 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 0-5 ವರ್ಷ ವಯೋಮಾನದ ಮಕ್ಕಳಿಗೆ ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.