ಅಸ್ವಚ್ಛತೆಯಿಂದ ಕೂಡಿದ ಹೆಸರೂರು ಗ್ರಾಮ

| Published : Nov 19 2024, 12:47 AM IST

ಸಾರಾಂಶ

ತಾಲೂಕಿನ ಹೆಸರೂರು ಗ್ರಾಮದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಸೂಕ್ತ ಕ್ರಮಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸಮರ್ಪಕ ಚರಂಡಿ, ಸಿಸಿ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಹೆಸರೂರು ಗ್ರಾಮದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಸೂಕ್ತ ಕ್ರಮಕ್ಕೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಗ್ರಾಮ ದೋಟಿಹಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತದೆ. ಗ್ರಾಮದಲ್ಲಿ ಇಬ್ಬರು ಗ್ರಾಪಂ ಸದಸ್ಯರು ಇದ್ದಾರೆ. ಅದರಲ್ಲಿ ಒಬ್ಬರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೂ ಸಹಿತ ಗ್ರಾಮವು ಅಭಿವೃದ್ಧಿಯಿಂದ ವಂಚಿತಗೊಂಡಿದೆ.

ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಗ್ರಾಮಕ್ಕೆ ಕಾಡುತ್ತಿದೆ. ಆದರೆ ಇಲ್ಲಿಯ ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಓರ್ವ ಸದಸ್ಯರು ತಮಗೇನೂ ಸಂಬಂಧವಿಲ್ಲದಂತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ದುರ್ವಾಸನೆ:

ಸರ್ಕಾರಿ ಶಾಲೆಯ ಪಕ್ಕದಲ್ಲಿಯೂ ಸಹಿತ ಗ್ರಾಮಸ್ಥರು ಬಳಸಿದ ನೀರು ಕಾಂಪೌಂಡ್‌ಗೆ ಹೊಂದಿಕೊಂಡು ಹರಿಯುತ್ತಿದ್ದು, ಶಾಲಾ ಮಕ್ಕಳು ದುರ್ವಾಸನೆ, ಗಲೀಜಿನಲ್ಲಿಯೇ ಸಂಚಾರ ಮಾಡುವಂತಾಗಿದೆ. ಮಧ್ಯಾಹ್ನದ ಸಮಯದಲ್ಲಿ ದುರ್ವಾಸನೆ ಜತೆಗೆ ಬಿಸಿಯೂಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಪಕ್ಕದಲ್ಲಿಯೇ ಮನೆ ಬಳಕೆ ನೀರು ನಿಲ್ಲುತ್ತಿದ್ದು, ಸಾರ್ವಜನಿಕರು ಓಡಾಡುವುದು ದುಸ್ತರವಾಗಿ ಪರಿಣಮಿಸಿದೆ.

ರಸ್ತೆ, ಚರಂಡಿ ಇಲ್ಲದ ಕಾರಣ ಅವ್ಯವಸ್ಥೆ ನಿರ್ಮಾಣವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಕ್ಕೆ ಕೂಡಲೇ ಮೂಲಭೂತ ಸೌಕರ್ಯ ಒದಗಿಸಿಕೊಡಲು ಮುಂದಾಗಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವಾಗಿದೆ.ಸೊಳ್ಳೆಗಳ ಕಾಟ:

ಚರಂಡಿ ಸೇರಬೇಕಾದ ನೀರು ರಸ್ತೆಯಲ್ಲಿ ನಿಲ್ಲುತ್ತಿರುವ ಪರಿಣಾಮವಾಗಿ ನಿತ್ಯ ಸಂಜೆ ಹೊತ್ತಿಗೆ ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ ಕಾರಣ ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.