ಒಂದು ದೇಶ, ರಾಜ್ಯ ಅಥವಾ ಪಂಚಾಯ್ತಿ ಅಭಿವೃದ್ಧಿಯಾಗಬೇಕಾದರೆ ಜನನಾಯಕನಲ್ಲಿ ಒಂದಷ್ಟು ವಿಚಾರಧಾರೆಗಳು ಇರಬೇಕು. ಕೇವಲ 12 ವರ್ಷಗಳಲ್ಲೇ ಇಷ್ಟು ದೊಡ್ಡದಾಗಿ ಅಭಿವೃದ್ಧಿಯಾಗಿ ವಿಶ್ವದ ಅನೇಕ ದೇಶಗಳು ಭಾರತದತ್ತ ತಿರುಗಿ ನೋಡುತ್ತಿವೆ.
ಕನ್ನಡಪ್ರಭ ವಾರ್ತ ಮಂಡ್ಯ
ಸಮರ್ಥ ರಾಜಕಾರಣಿಯಾದವನಿಗೆ ಯೋಚನೆ, ಯೋಜನೆ ಹಾಗೂ ದೂರದೃಷ್ಟಿ ಪ್ರಬಲವಾಗಿರಬೇಕು. ಹಾಗ ಮಾತ್ರ ದೇಶ, ರಾಜ್ಯ, ಪಂಚಾಯ್ತಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರತಿಪಾದಿಸಿದರು.ಬಿಜೆಪಿ ವತಿಯಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಸುದೀರ್ಘ 25 ವರ್ಷಗಳ ಸಾರ್ವಜನಿಕ ಜೀವನ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸೇವೆ ಮತ್ತು ಸಾಧನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ದೇಶ, ರಾಜ್ಯ ಅಥವಾ ಪಂಚಾಯ್ತಿ ಅಭಿವೃದ್ಧಿಯಾಗಬೇಕಾದರೆ ಜನನಾಯಕನಲ್ಲಿ ಒಂದಷ್ಟು ವಿಚಾರಧಾರೆಗಳು ಇರಬೇಕು. ಕೇವಲ 12 ವರ್ಷಗಳಲ್ಲೇ ಇಷ್ಟು ದೊಡ್ಡದಾಗಿ ಅಭಿವೃದ್ಧಿಯಾಗಿ ವಿಶ್ವದ ಅನೇಕ ದೇಶಗಳು ಭಾರತದತ್ತ ತಿರುಗಿ ನೋಡುತ್ತಿವೆ ಎಂದರು.ಕೋವಿಡ್ ಸಂದರ್ಭದಲ್ಲಿ 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ನಂಬಿದ್ದವು. ಆದರೆ, ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದಾಗಿ ಸಾವಿನ ಸಂಖ್ಯೆ ಕಡಿಮೆಯಾಗಿದ್ದರ ಜೊತೆಗೆ ಎರಡು ಲಸಿಕೆಗಳನ್ನು ದೇಶವಾಸಿಗಳಿಗೆ ನೀಡಲಾಯಿತು. ಇದರೊಂದಿಗೆ ವಿಶ್ವದ ಹಲವಾರು ರಾಷ್ಟ್ರಗಳಿಗೂ ಲಸಿಕೆಯನ್ನು ಪೂರೈಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಪ್ರಧಾನಿ ಮತ್ತು ಭಾರತ ಸರ್ಕಾರ ಮಾಡುವಂತಹ ಕಾರ್ಯಗಳನ್ನು 140 ಕೋಟಿ ಜನರೂ ಮೆಚ್ಚಬೇಕು. ಇದರಲ್ಲಿ ಕಾಂಗ್ರೆಸ್‌ನವರೂ ಸಹ ಮೆಚ್ಚುವಂತಹ ಆಡಳಿತ ನೀಡಬೇಕು ಎಂಬುದು ಪ್ರಧಾನಿಯವರ ಇಚ್ಚೆಯೂ ಆಗಿದೆ ಎಂದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವ ವೇಳೆ ವಿಪಕ್ಷದ ಒಬ್ಬರೇ ಒಬ್ಬ ನಾಯಕರ ವಿರುದ್ದವೂ ಒಂದೇ ಒಂದು ಶಬ್ದ ಟೀಕಿಸುವಂತಹ ಕೆಲಸ ಮಾಡಲಿಲ್ಲ. ಇಂತಹ ನಾಯಕತ್ವ ಗುಣವನ್ನು ಪ್ರತಿಯೊಬ್ಬ ಜನನಾಯಕನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮರ್ಯಾದ ಪುರುಷೋತ್ತಮ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಾಣ ಮಾಡಬೇಕೆಂಬುದು ಬಹುಜನರ ಆಸೆಯಾಗಿತ್ತು. ಇದನ್ನು ಹಲವಾರು ಸರ್ಕಾರಗಳು ಮಾಡಲೇ ಇಲ್ಲ. ಮಂದಿರ ನಿರ್ಮಾಣ ಮಾಡಿದಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಗುತ್ತದೆ ಎಂಬ ವಾತಾವರಣವನ್ನು ಸೃಷ್ಟಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಸಣ್ಣ ಘಟನೆಗೂ ಆಸ್ಪದ ನೀಡದಂತೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಿದರು ಎಂದು ವಿವರಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ದೇಶಾದ್ಯಂತ ವೈದ್ಯಕೀಯ ಮತ್ತು ಐಐಟಿ ಕಾಲೇಜುಗಳು ಎರಡು ಮೂರು ಪಟ್ಟು ಹೆಚ್ಚಿವೆ. ಲಕ್ಷಾಂತರ ಮಂದಿ ಪದವಿ ಪಡೆಯುತ್ತಿದ್ದಾರೆ ಎಂದರು.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಮೈಸೂರು ವಿಭಾಗೀಯ ಸಹ ಪ್ರಭಾರಿ ಈ.ಸಿ. ನಿಂಗರಾಜ್‌ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಇಂದ್ರೇಶ್, ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ರಾಜ್ಯ ಕಾರ್ಯದರ್ಶಿ ಎಚ್.ಆರ್. ಅಶೋಕ್‌ಕುಮಾರ್, ಮುಖಂಡರಾದ ಡಾ. ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ, ಕೆ. ನಾಗಣ್ಣಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.