ಸಾರಾಂಶ
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ 369 ಗ್ರಾಮಗಳಿಗೆ 980 ಕೋಟಿ ರು.ಗಳ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಬೆಂಗಳೂರಿನಲ್ಲಿ 50 ಕೋಟಿ ರು. ವೆಚ್ಚದಲ್ಲಿ ಹೆಲ್ತ್ ಟೆಕ್ ಮತ್ತು ಮೆಡ್ ಟೆಕ್ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ 369 ಗ್ರಾಮಗಳಿಗೆ 980 ಕೋಟಿ ರು.ಗಳ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಬೆಂಗಳೂರಿನಲ್ಲಿ 50 ಕೋಟಿ ರು. ವೆಚ್ಚದಲ್ಲಿ ಹೆಲ್ತ್ ಟೆಕ್ ಮತ್ತು ಮೆಡ್ ಟೆಕ್ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಮೈಸೂರು ಟಿ. ನರಸೀಪುರ ತಾಲೂಕಿನ ಮೂಗೂರು ಮತ್ತು ಇತರೆ 43 ಜನವಸತಿ ಪ್ರದೇಶ,ಮೈಸೂರು ತಾಲೂಕು ಉಂಡವಾಡಿ ಮತ್ತು ಇತರೆ 67 ಜನವಸತಿ ಪ್ರದೇಶ,ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಕಮಲಾಪುರ ತಾಲೂಕುಗಳಲ್ಲಿ ವಿ.ಕೆ. ಸಲಗಾರ್ ಮತ್ತು ಇತರೆ 16 ಗ್ರಾಮ,ಜೇವರ್ಗಿ ತಾಲೂಕಿನ 22 ಗ್ರಾಮ,ಬೀದರ್ ತಾಲೂಕಿನ ಬಗ್ದಾಲ್ ಮತ್ತು ಇತರೆ 136 ಜನವಸತಿ ಪ್ರದೇಶ ಹಾಗೂ ರಾಣೆಬೆನ್ನೂರು ತಾಲೂಕಿನಲ್ಲಿ 100 ಕೋಟಿ ರು.ಗಳ ವೆಚ್ಚದಲ್ಲಿ 27 ಗ್ರಾಮಗಳಿಗೆ ಕುಡಿಯುವ ನೀರೊದಗಿಸಲು ಒಪ್ಪಿಗೆ ನೀಡಿದೆ.
ರಾಜ್ಯದ ಆರು ಕೇಂದ್ರ ಕಾರಾಗೃಹಗಳು ಮತ್ತು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ ಉಪಕರಣಗಳ ಮೇಲ್ದರ್ಜೆಗೇರಿಸುವುದು ಹಾಗೂ ಮೂರು ವರ್ಷಗಳ ಕಾಲ ನಿರ್ವಹಣೆಯನ್ನು 43.75 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ. ಕರ್ನಾಟಕ ಅನಿಮೇಷನ್, ವಿಷಯಲ್ ಎಫೆಕ್ಟ್, ಗೇಮಿಂಗ್ ಕಾಮಿಕ್ಸ್ ಮತ್ತು ಎಕ್ಸೆಂಟೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್‌ಆರ್) ನೀತಿ 3.0 (2024-2029)ಗೆ ಅನುಮೋದನೆ ನೀಡಲಾಗಿದ್ದು ಮುಂದಿನ 5 ವರ್ಷದಲ್ಲಿ 150 ಕೋಟಿ ರು. ವಿನಿಯೋಗಿಸಲು ನಿರ್ಧರಿಸಲಾಗಿದೆ. ಬಾಕ್ಸ್...ಎಸ್ಸಿ/ಎಸ್ಟಿಗಳಿಗೆ ಪೌರಕಾರ್ಮಿಕ ಹುದ್ದೆ
ಬಿಬಿಎಂಪಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸೃಜಿಸಲಾಗಿರುವ 11,307 ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ವೇಳೆ ಅರ್ಹ ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಆ ಹುದ್ದೆಗಳಿಗೂ ಅರ್ಹ ಎಸ್ಸಿ/ಎಸ್ಟಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿತು.ಇತರೆ ಸಂಪುಟ ತೀರ್ಮಾನ
*ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ವಿಳಂಬ ಹಿನ್ನೆಲೆಯಲ್ಲಿ ನಾಲ್ಕು ಕಂಪೆನಿಗಳಿಗೆ ನೀಡಿದ್ದ ಅನುಮತಿ ರದ್ದು.*ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸೇರಿದ 136 ಮೆಟ್ರಿಕ್ ಪೂರ್ವ, 134 ಮೆಟ್ರಿಕ್ ನಂತರದ, 119 ವಾಲ್ಮೀಕಿ ಆಶ್ರಮ ಶಾಲೆಗಳಿಗೆ 69.13 ಕೋಟಿ ರೂ. ಮೊತ್ತದಲ್ಲಿ ಆಹಾರ ಪದಾರ್ಥ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಖರೀದಿಸಲು ಸಮ್ಮತಿ.