ಸಾರಾಂಶ
ಕ್ಯಾಂಟೀನ್ ಇಲ್ಲದ ಕಡೆ ಬಿಎಂಟಿಸಿ ನೌಕರರಿಗೆ ಗುಜರಿ ಬಸ್ಸನ್ನು ಮರು ವಿನ್ಯಾಸಗೊಳಿಸಿ ಭೋಜನಾಲಯ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ಯಾಂಟೀನ್‌ಗಳಿಲ್ಲದ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ನಿಗಮದ ಸಿಬ್ಬಂದಿ ಕುಳಿತು ಅರಾಮಾಗಿ ಊಟ ಮಾಡುವ ಸಲುವಾಗಿ ಗುಜರಿಗೆ ಹಾಕಬೇಕಿದ್ದ ಬಸ್ಸನ್ನು ಊಟದ ಹಾಲ್ ಆಗಿ ಪರಿವರ್ತಿಸಿ ಶೀಘ್ರದಲ್ಲಿ ಸೇವೆಗೆ ನೀಡಲು ಉದ್ದೇಶಿಸಲಾಗಿದೆ.ಬಿಎಂಟಿಸಿಯ ಉತ್ತರ ವಲಯದ ಕಾರ್ಯಾಗಾರ 4ರಲ್ಲಿನ ಲೇಲ್ಯಾಂಡ್ ಉಗ್ರಾಣ ಬಸ್ 10.64 ಲಕ್ಷ ಕಿ.ಮೀ. ಕ್ರಮಿಸಿದ್ದು, ಗುಜರಿಗೆ ಹಾಕಬೇಕಿತ್ತು. ಆದರೆ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ಅವರ ನಿರ್ದೇಶನದ ಮೇರೆಗೆ ಬಸ್ಸನ್ನು ಕಾರ್ಯಾಗಾರದ ತಾಂತ್ರಿಕ ಸಿಬ್ಬಂದಿ, ಬಸ್ಸನ್ನು ಊಟದ ಹಾಲ್ ಆಗಿ ಪರಿವರ್ತಿಸಿದ್ದಾರೆ. ಅದಕ್ಕೆ ಭೋಜನ ಬಂಡಿ ಎಂದು ಹೆಸರಿಡಲಾಗಿದ್ದು, ಅದರಲ್ಲಿ ಒಮ್ಮೆಲೇ 10 ಮಂದಿ ಕುಳಿತು ಊಟ ಮಾಡಲು ಅನುವಾಗುವಂತೆ ಆಸನ ಮತ್ತು ಟೇಬಲ್ ಅಳವಡಿಸಲಾಗಿದೆ. ಅಲ್ಲದೆ, ಬಸ್‌ನಲ್ಲಿ ಕುಡಿಯಲು ಮತ್ತು ಕೈತೊಳೆಯಲು ಪ್ರತ್ಯೇಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ.
ನೂತನ ಭೋಜನ ಬಂಡಿಯನ್ನು ಗುರುವಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ, ತಾಂತ್ರಿಕ ಎಂಜಿನಿಯರ್ ಎ.ಎನ್.ಗಜೇಂದ್ರಕುಮಾರ್ ಅವರು ಪರಿಶೀಲಿಸಿದರು. ಶೀಘ್ರದಲ್ಲಿ ಭೋಜನ ಬಂಡಿ ಸೇವೆಗೆ ಲಭ್ಯವಾಗಲಿದೆ.