ಸಾರಾಂಶ
ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ, ಹಿರಿಯ ವಿಮರ್ಶಕ ಡಾ. ಕೆ.ಎಸ್. ಶರ್ಮಾ ಅವರ ಭವ್ಯ ಮೆರವಣಿಗೆಗೆ ಜೆಎಸ್ಸೆಸ್ ಪಿಜಿ ಕೇಂದ್ರದ ಉಪಪ್ರಾಚಾರ್ಯ ಡಾ. ಸೂರಜ್ ಜೈನ್ ಕನ್ನಡ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಧಾರವಾಡ
ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ, ಕನ್ನಡಕ್ಕಾಗಿ ನಡಿಗೆ ವಾದ್ಯಮೇಳದೊಂದಿಗೆ ಇಲ್ಲಿಯ ಜೆಎಸ್ಸೆಸ್ ಆವರಣದಲ್ಲಿ ಬುಧವಾರ ಅದ್ಧೂರಿಯಾಗಿ ಜರುಗಿತು.ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ, ಹಿರಿಯ ವಿಮರ್ಶಕ ಡಾ. ಕೆ.ಎಸ್. ಶರ್ಮಾ ಅವರ ಭವ್ಯ ಮೆರವಣಿಗೆಗೆ ಜೆಎಸ್ಸೆಸ್ ಪಿಜಿ ಕೇಂದ್ರದ ಉಪಪ್ರಾಚಾರ್ಯ ಡಾ. ಸೂರಜ್ ಜೈನ್ ಕನ್ನಡ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಜನತಾ ಶಿಕ್ಷಣ ಸಮಿತಿಯ ಮುಖ್ಯ ದ್ವಾರದಿಂದ ಪ್ರಾರಂಭವಾದ ಮೆರವಣಿಗೆ ಸಂಸ್ಥೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಸನ್ನಧಿ ಕಲಾಕ್ಷೇತ್ರದ ಮುಖ್ಯ ವೇದಿಕೆಗೆ ಕರೆ ತರಲಾಯಿತು.
ಮೆರವಣಿಗೆಯುದ್ಧಕೂ ಕನ್ನಡಪರ, ನಾಡು-ನುಡಿ ಜಯಘೋಷ ಮೊಳಗಿದವು. ಡೊಳ್ಳು ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯಮೇಳಗಳು ಕನ್ನಡ ನುಡಿ ತೇರಿಗೆ ಮೆರವಣಿಗೆಗೆ ಮೆರಗು ತುಂಬಿದವು. ಕಸಾಪ ಪದಾಧಿಕಾರಿಗಳಾದ ಡಾ. ಲಿಂಗರಾಜ ಅಂಗಡಿ, ಡಾ. ಎಸ್.ಎಸ್. ದೊಡಮನಿ, ಪ್ರೊ. ಕೆ.ಎಸ್. ಕೌಜಲಗಿ, ಮಹಾಂತೇಶ ನರೇಗಲ್, ಮಾರ್ತಾಂಡಪ್ಪ ಕತ್ತಿ, ಎಫ್.ಬಿ. ಕಣವಿ, ಮಹಾವೀರ ಉಪಾದ್ಯೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೆರವಣಿಗೆಗೂ ಮೊದಲು ಸನ್ನಿಧಿ ಕಲಾಕ್ಷೇತ್ರದ ಮುಂಭಾಗ ಡಾ. ನಾಗಚಂದ್ರ ರಾಷ್ಟ್ರಧ್ವಜ, ಸಾಹಿತಿ ವೆಂಕಟೇಶ ಮಾಚಕೂನ ನಾಡಧ್ವಜ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.ಆಧುನಿಕತೆ ಪ್ರವೇಶದಿಂದ ಕ್ಷೀಣಿಸಿದ ಬೌದ್ಧಿಕತೆ: ಡಾ. ರಾಘವೇಂದ್ರ ಪಾಟೀಲ
ಕನ್ನಡಪ್ರಭ ವಾರ್ತೆ ಧಾರವಾಡಮನುಷ್ಯನಲ್ಲಿ ಆಧುನಿಕತೆ ಪ್ರವೇಶಿಸಿದಂತೆ ಅಂತಃಕರಣದ ಅಂಶ ಕ್ಷೀಣಿಸುವ ಜೊತೆಗೆ ಬೌದ್ಧಿಕತೆ ಪ್ರಧಾನವಾಗಿ, ವೈಚಾರಿಕತೆಗೆ ನಾಂದಿ ಒದಗಿಸಿತು ಎಂದು ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟ್ ಅಧ್ಯಕ್ಷ ಡಾ.ರಾಘವೇಂದ್ರ ಪಾಟೀಲ ಹೇಳಿದರು.ಜನತಾ ಶಿಕ್ಷಣ ಸಮಿತಿ ಸನ್ನಿಧಿ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಸಾಹಿತ್ಯ ಸಮ್ಮೇಳನದ ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು, ಆಧುನಿಕತೆ ಭಾಷೆಯನ್ನು ಮತ್ತಷ್ಟು ಬೆಳೆಸುವತ್ತ ಸಾಗಬೇಕಿದೆ. ಆದರ ಬದಲು ಮೌಢ್ಯತೆ ಹೆಚ್ಚುತ್ತಿರುವುದು ಬೇಸರದ ಸಂಗತಿ ಎಂದರು.ಜನಪದ ಸಾಹಿತ್ಯದಲ್ಲಿ ಬಂಡಾಯದ ನೆಲೆಗಳು ವಿಷಯ ಮಂಡಿಸಿದ ಡಾ. ವೈ.ಎಂ. ಭಜಂತ್ರಿ, ಜನಪದ ಪರಂಪರೆ ತುಂಬಾ ವಿಶಾಲ, ವಿಸ್ತಾರದ ಸಾಹಿತ್ಯ. ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗದ ತುಂಬ ಎಂಬ ಹೊಂದಿದ ಸಂಸ್ಕೃತಿ. ಸಾಹಿತ್ಯದಲ್ಲಿ ಬಂಡಾಯದ ನೆಲೆ ಕಾಣಬಹುದು. ಬಂಡಾಯ ಮತ್ತು ಸಾಹಿತ್ಯ ಒಂದೇ ನಾಣ್ಯದ ಮುಖ. ಬಂಡಾಯ ಒಂದು ಮನೋಧರ್ಮ. ಪ್ರತಿಭಟಿಸುವ, ಅನ್ಯಾಯ, ಶೋಷಣೆ ವಿರುದ್ಧ ಧ್ವನಿ, ಆಶಯ, ಅಭಿವ್ಯಕ್ತಿಯೂ ಹೌದು ಎಂದು ತಿಳಿಸಿದರು.ಸಾಹಿತ್ಯದಲ್ಲಿ ವೈಚಾರಿಕತೆ-ಸೃಜನಶೀಲತೆ ವಿಷಯ ಮಂಡಿಸಿದ ನಿವೃತ್ತ ಅಧಿಕಾರಿ ಡಾ.ಅರವಿಂದ ಯಾಳಗಿ, ಸಾಹಿತ್ಯದಲ್ಲಿ ಸೃಜನಶೀಲತೆ, ವೈಚಾರಿಕತೆ ಇಲ್ಲವಾದರೆ, ಸಾಹಿತ್ಯ ನಿರರ್ಥಕ. ಸಾಹಿತ್ಯ ಬದುಕಿನ ಜಿಜ್ಞಾಸೆ ಮೂಡಿಸಬೇಕು ಎಂದರು.ಡಾ. ಎಸ್.ಎಸ್. ಹಿರೇಮಠ, ಡಾ. ಸುನೀತಾ ಪಾಟೀಲ ಇದ್ದರು. ಚನ್ನಬಸಪ್ಪ ಧಾರವಾಡಶೆಟ್ಟರ ಸ್ವಾಗತಿಸಿದರು. ಡಾ.ಬಿ.ಎಸ್.ಮಾಳವಾಡ ನಿರೂಪಿಸಿದರು. ಆರ್.ಎಂ.ಗೋಗೆರಿ ವಂದಿಸಿದರು.