ಸಾರಾಂಶ
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ
ಕನ್ನಡಪ್ರಭ ವಾರ್ತೆ ಬಳ್ಳಾರಿನಾಡಿನ ಖ್ಯಾತ ಲೇಖಕ ಬರಗೂರು ರಾಮಚಂದ್ರಪ್ಪ ಅವರ "ಶಬರಿ " ಕಾದಂಬರಿಯಲ್ಲಿ ಆಧುನಿಕತೆಯಿಂದ ದೂರವಿರುವ ಬುಡಕಟ್ಟು ಜನಾಂಗದ ನಿತ್ಯ ಬದುಕಿನ ದಟ್ಟ ವಿವರಗಳಿದ್ದು ಬುಡಕಟ್ಟು ಆದಿವಾಸಿ ಸಮುದಾಯದ ಮಹಿಳೆಯರ ಅನಾಥ ಪ್ರಜ್ಞೆ, ಸಂಕಷ್ಟ, ಪ್ರತಿರೋಧದ ಎಚ್ಚರಿಕೆಯನ್ನು ಬರಗೂರರ ಶಬರಿಯಲ್ಲಿ ಕಾಣಲು ಸಾಧ್ಯ ಎಂದು ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಮುಮ್ತಾಜ್ ಬೇಗಂ ತಿಳಿಸಿದರು.
ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಬರಗೂರು ರಾಮಚಂದ್ರಪ್ಪ ಅವರ ಕಾದಂಬರಿ "ಶಬರಿ " ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು."ಶಬರಿ " ಒಂದು ಪಾತ್ರವಾಗದೆ ಒಂದು ರೂಪಕವಾಗಿದೆ. ಈ ರೂಪಕಕ್ಕೆ ಹಿನ್ನಲೆಯಾಗಿ ಬರುವುದು ಬುಡಕಟ್ಟು ಜನಾಂಗದ ಬವಣೆಯ ಬದುಕು. ಬುಡಕಟ್ಟು ಬದುಕಿನ ವಿವರಗಳ ಮೂಲಕ ಚಲನಶೀಲ ಸಂಸ್ಕೃತಿಯ ಅಂತಃಶಕ್ತಿಯನ್ನು ಅನಾವರಣಗೊಳಿಸುವ, ರಾಜಕೀಯ ಅಂತಃಕರಣವನ್ನು ಶೋಧಿಸುವ, ಒಂದು ನೈಜ ಪ್ರಯತ್ನವಾಗಿ ಶಬರಿ ಕಾದಂಬರಿ ರಚನೆಯಾಗಿದೆ.
ಜಮೀನ್ದಾರಿ ಪದ್ಧತಿ, ಭೂಸುಧಾರಣಾ ಕಾಯ್ದೆ, ಬುಡಕಟ್ಟು ಜನಾಂಗದ ತವಕ-ತಲ್ಲಣಗಳು, ನೋವು ನಿರಾಸೆಗಳನ್ನು ಕೃತಿ ಅದ್ಭುತವಾಗಿ ಪ್ರಕಟಿಸಿದೆ. ಪಾಶ್ಚತ್ಯ ಆಧುನಿಕ ನಾಗರಿಕತೆ ಭಾರತದಂತಹ ಸಂಪ್ರದಾಯಬದ್ಧ ಸಮಾಜದ ಮೇಲೆ ಆಕ್ರಮಣ ನಡೆಸಿದಾಗ ತನ್ನ ಸಾಮಾಜಿಕ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಬುಡಕಟ್ಟು ಜನಾಂಗ ನಡೆಸಿದ ಹೋರಾಟದ ಕಥೆಯನ್ನು ಶಬರಿ ಕಾದಂಬರಿಯಲ್ಲಿ ಕಾಣಬಹುದಾಗಿದೆ ಎಂದರು.ರಾಮಾಯಣದ ಶಬರಿಗೂ ಈ ಕಾದಂಬರಿಯ ಶಬರಿಗೂ ಸಾಮ್ಯತೆಗಳಿವೆ. ಅಲ್ಲಿ ಭಕ್ತಿ ಪ್ರಧಾನವಾದರೆ ಇಲ್ಲಿ ಮುಕ್ತಿ ಪ್ರಧಾನವಾಗಿದೆ. ಶಬರಿ ಶೋಷಣೆಯ ಮತ್ತು ಶ್ರಮ ಸಂಸ್ಕೃತಿಯ ಕೇಂದ್ರವಾಗಿ ಚಿತ್ರಣಗೊಂಡಿದ್ದಾಳೆ. ಕಾದಂಬರಿಯುದ್ದಕ್ಕೂ ಬೆವರಿನ ಸಂಸ್ಕೃತಿ ಮತ್ತು ಭೂಮಿ ತತ್ವದ ನಿಲುವುಗಳಿವೆ. ಇಲ್ಲಿನ ಕಥಾನಾಯಕಿ ತನ್ನ ಇರುವಿಕೆಗಾಗಿ, ಸಮಾಜದ ವಿಮೋಚನೆಗಾಗಿ ಹಂಬಲಿಸುತ್ತಲೇ ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಂಡಿರುವ ದಿಟ್ಟೆ. ನೆಲ, ಕಾಡು, ಸಂಸ್ಕೃತಿಯೊಂದಿಗೆ ಆಕೆಯ ಬದುಕು ಹಾಸುಹೊಕ್ಕಾಗಿದೆ ಎಂದು ವಿಶ್ಲೇಷಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಸಿ.ಕೊಟ್ರೇಶ, ಸ್ತ್ರೀವಾದಿ ನೆಲೆಯ ಆಶಯಗಳನ್ನು ಬರಗೂರರು ಇಲ್ಲಿನ ಸ್ತ್ರೀ ಪಾತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ. ಬಹುತ್ವದ ಚಿಂತನೆ ಎತ್ತಿ ಹಿಡಿದಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ, ಬುಡಕಟ್ಟು ಸಮುದಾಯಗಳ ಸಮಸ್ಯೆ, ಸಂಕಟಗಳು ಇಂದಿಗೂ ಬದಲಾಗಿಲ್ಲ. ಹಲವು ಬಗೆಯ ಬಿಕ್ಕಟ್ಟು, ಸವಾಲುಗಳನ್ನು ಎದುರಿಸುವ ಸಮುದಾಯಗಳನ್ನು ಅಕ್ಷರದ ಅರಿವಿನಿಂದ ಮುಖ್ಯ ವಾಹಿನಿಗೆ ಕರೆದುಕೊಂಡು ಬರುವ ಅಗತ್ಯ ತುಂಬಾ ಇದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, ಪ್ರಾಧ್ಯಾಪಕರಾದ ಬಿ. ರಾಮಸ್ವಾಮಿ, ಪ್ರವೀಣ್ ಕುಮಾರ್, ಲಿಂಗಪ್ಪ, ಡಾ. ದುರುಗಪ್ಪ, ಡಾ. ಕೆ. ಬಸಪ್ಪ, ಶಂಕರ್, ಜಯರಾಮ್, ಸಿದ್ದೇಶ, ರುದ್ರಮುನಿ, ಸಿ.ಮಂಜುನಾಥ್, ನಂದೀಶ್ವರ ಮತ್ತಿತರರಿದ್ದರು.