ಸಾರಾಂಶ
ವಿಧಾನಸೌಧದಲ್ಲಿ ವಿಧಾನ ಪರಿಷತ್ತು ಸಭಾಪತಿಯವರ ಕೊಠಡಿಯಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ದೇಶ ರಕ್ಷಣೆಗಾಗಿ ಮಡಿದ ವೀರ ಸೈನಿಕರ ತ್ಯಾಗ, ಶೌರ್ಯ, ಬಲಿದಾನ ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ವಿಧಾನ ಪರಿಷತ್ತು ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.ಶನಿವಾರ ವಿಧಾನಸೌಧದಲ್ಲಿ ವಿಧಾನ ಪರಿಷತ್ತು ಸಭಾಪತಿಯವರ ಕೊಠಡಿಯಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ಸಂಬಂಧಿಸಿದಂತೆ ಸೇನಾಧಿಕಾರಿಗಳಿಗೆ ಶ್ರದ್ಧಾಂಜಲಿ ಕಳಸ ಹಸ್ತಾಂತರಿಸಿ ಅವರು ಮಾತನಾಡಿದರು.
ಹುತಾತ್ಮರಾಗಿರುವ ಯೋಧರ ಶೌರ್ಯ, ತ್ಯಾಗವನ್ನು ದೇಶವು ಸದಾ ಸ್ಮರಿಸುತ್ತದೆ. ದೇಶದ ತ್ರಿವರ್ಣ ಧ್ವಜದ ಗೌರವ ಮತ್ತು ಘನತೆ ಎತ್ತಿ ಹಿಡಿಯಲು ತಮ್ಮ ಬದುಕನ್ನೇ ಯೋಧದರು ತ್ಯಾಗ ಮಾಡಿದ್ದಾರೆ. ರಾಷ್ಟ್ರಕ್ಕೆ ವೀರರನ್ನು ನೀಡಿದ ಅವರ ಕುಟುಂಬದ ತ್ಯಾಗವನ್ನು ವರೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಹುತಾತ್ಮ ಯೋಧರ ಕುಟುಂಬಕ್ಕೆ ಆದ್ಯತೆ ನೀಡಿ, ಸಕಲ ನೆರವು ನೀಡಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಾಗಾರಾಜ್ ಯಾದವ್, ಕೊಲೋನೆಲ್ ಪಿ.ವಿ.ಹರಿ, ಕ್ಯಾಪ್ಟನ್ ಭಂಡಾರಿ, ಎನ್.ಕೆ.ಮಣಿಕಂಟನ್, ರಾಜಣ್ಣ, ಬಿ.ಕೆ. ಕಾರ್ಗಿಲ್ ದಿನೇಶ್, ಬಿ.ಪಿ.ಶಿವಕುಮಾರ್, ಆರ್.ವಾಸುದೇವನ್ ಹಾಗೂ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ಮಿ ಉಪಸ್ಥಿತರಿದ್ದರು.