ಉತ್ತರ ಕನ್ನಡ ಜಿಲ್ಲೆಯ ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಅದ್ಧೂರಿ ಕರಾವಳಿ ಉತ್ಸವ-2025ರ ಸಂಭ್ರಮಕ್ಕೆ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಸುಧೆ ಮತ್ತಷ್ಟು ಮೆರುಗು ನೀಡಿತು.
ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಎಂದು ಸೋನು ನಿಗಮ್ ಭಾವುಕ
ಕರಾವಳಿ ಉತ್ಸವದಲ್ಲಿ ಕನ್ನಡಿಗರ ಮನಗೆದ್ದ ಬಾಲಿವುಡ್ ಗಾಯಕಕನ್ನಡಪ್ರಭ ವಾರ್ತೆ ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಕಡಲ ನಗರಿ ಕಾರವಾರದಲ್ಲಿ ನಡೆಯುತ್ತಿರುವ ಅದ್ಧೂರಿ ಕರಾವಳಿ ಉತ್ಸವ-2025ರ ಸಂಭ್ರಮಕ್ಕೆ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಸಂಗೀತ ಸುಧೆ ಮತ್ತಷ್ಟು ಮೆರುಗು ನೀಡಿತು. ಸಹಸ್ರಾರು ಪ್ರೇಕ್ಷಕರ ಎದುರು ತಮ್ಮ ಸುಮಧುರ ಕಂಠದ ಮೂಲಕ ಮೋಡಿ ಮಾಡಿದ ಸೋನು, ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಆಡಿದ ಮಾತುಗಳು ಕನ್ನಡಿಗರ ಹೃದಯ ಗೆದ್ದಿವೆ.ಉತ್ಸವದ ಮೂರನೇ ದಿನವಾದ ಬುಧವಾರ ಗಾಯಕ ಸೋನು ನಿಗಮ್ ಅವರ ಕಾರ್ಯಕ್ರಮವಿದ್ದು, ರಾತ್ರಿ 10 ಗಂಟೆಗೆ ವೇದಿಕೆಯೇರಿದ ಅವರು ಹಿಂದಿ ಹಾಡಿನ ಮೂಲಕ ಕಾರ್ಯಕ್ರಮ ಆರಂಭಿಸಿದರು. ಕೆಲವು ಹಾಡುಗಳ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಇಲ್ಲಿ ಕನ್ನಡಿಗರಿದ್ದೀರಾ ಎಂದು ಪ್ರೇಕ್ಷಕರನ್ನ ಕೇಳಿದರು. ನೆರೆದಿದ್ದವರಿಂದ ಉತ್ತಮ ಪ್ರತಿಕ್ರಿಯೆ ಬಂದ ಬಳಿಕ ಮಾತು ಮುಂದುವರೆಸಿ, ಕಳೆದ 25-30 ವರ್ಷಗಳ ನನ್ನ ಸಂಗೀತ ಪಯಣದಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದೇನೆ, ಆದರೆ ಅದರಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನವಿದೆ. ನನಗೆ ಸಿಕ್ಕಿರುವ ಇಷ್ಟು ಅದ್ಭುತವಾದ ಕನ್ನಡ ಹಾಡುಗಳನ್ನು ನೋಡಿದರೆ, ನಾನೊಬ್ಬ ಪುಣ್ಯವಂತ ಎನಿಸುತ್ತದೆ. ಬಹುಶಃ ನಾನು ನನ್ನ ಕಳೆದ ಜನ್ಮದಲ್ಲಿ ಕನ್ನಡಿಗನಾಗಿಯೇ ಹುಟ್ಟಿದ್ದೆನೋ ಏನೋ ಎಂದು ಭಾವುಕರಾಗಿ ನುಡಿದಾಗ ನೆರೆದಿದ್ದ ಜನಸಾಗರ ಚಪ್ಪಾಳೆಗಳ ಮೂಲಕ ಹರ್ಷ ವ್ಯಕ್ತಪಡಿಸಿತು.
ನನ್ನ ಬಳಿ ಇರುವ ಕೆಲವು ಕನ್ನಡ ಹಾಡುಗಳು ಹಿಂದಿ ಹಾಡುಗಳಿಗಿಂತಲೂ ಅತ್ಯುತ್ತಮವಾಗಿವೆ. ನನ್ನ ಕನ್ನಡ ಹಾಡುಗಳ ಪಟ್ಟಿ ಎಷ್ಟು ದೊಡ್ಡದಿದೆ ಎಂದರೆ, ಕೇವಲ ಕನ್ನಡ ಹಾಡುಗಳನ್ನೇ ಹಾಡುವ ಮೂಲಕ ನಾನು ಸತತ 6 ಗಂಟೆಗಳ ಕಾಲ ಕಾರ್ಯಕ್ರಮ ನೀಡಬಲ್ಲೆ ಎಂದು ಹೇಳಿದರು. ಆದರೂ ಪ್ರೇಕ್ಷಕರ ಇಚ್ಛೆಯಂತೆ ಕನ್ನಡ ಮತ್ತು ಹಿಂದಿ ಎರಡೂ ಭಾಷೆಯ ಹಾಡುಗಳನ್ನು ಸಮತೋಲನಗೊಳಿಸಿ ಮನರಂಜನೆ ನೀಡುವುದಾಗಿ ತಿಳಿಸಿದರು.ಮುಂಬೈನಲ್ಲಿ ನೆಲೆಸಿದ್ದರೂ, ಕನ್ನಡ ಹಾಡುಗಳನ್ನು ಹಾಡುವಾಗ ಅದರ ಸಾಹಿತ್ಯ ಮತ್ತು ಭಾವಾರ್ಥವನ್ನು ಅರಿತು ಅತ್ಯಂತ ಶ್ರದ್ಧೆಯಿಂದ ಹಾಡುವುದಾಗಿ ಅವರು ಹೇಳಿಕೊಂಡರು. ಗಾಯನದ ವೇಳೆ ಉಚ್ಚಾರಣೆಯಲ್ಲಿ ಏನಾದರೂ ಸಣ್ಣಪುಟ್ಟ ಲೋಪಗಳಿದ್ದರೆ ದಯವಿಟ್ಟು ಕ್ಷಮಿಸಿ, ಭಾಷೆಯ ಮೇಲಿರುವ ನನ್ನ ಪ್ರೀತಿ ಮತ್ತು ಗೌರವವನ್ನು ಕನ್ನಡಿಗರು ಸ್ವೀಕರಿಸಬೇಕು ಎಂದು ವಿನಮ್ರವಾಗಿ ಮನವಿ ಮಾಡಿಕೊಂಡರು. ಸೋನು ನಿಗಮ್ ಅವರ ಈ ಅಭಿಮಾನದ ಮಾತುಗಳು ಮತ್ತು ಅದ್ಭುತ ಗಾಯನ ಕಾರವಾರದ ಕಡಲತೀರದಲ್ಲಿ ಸಂಗೀತದ ಅಲೆ ಎಬ್ಬಿಸಿತು.
ಸೋನು ನಿಗಮ್ ಅವರು ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ತಮ್ಮ ಗಾನಸುಧೆಯನ್ನು ಹರಿಸಿ ಪ್ರೇಕ್ಷಕರನ್ನು ರಂಜಿಸಿದ್ದು, ಈ ವೇಳೆ ಹತ್ತಕ್ಕೂ ಅಧಿಕ ಸುಮಧುರವಾದ ಕನ್ನಡ ಹಾಡುಗಳನ್ನೂ ಹಾಡುವ ಮೂಲಕ ಕನ್ನಡಿಗರ ಮೆಚ್ಚುಗೆಯನ್ನೂ ಗಳಿಸಿದರು. ಹಿಂದಿಯ ಹಳೆಯ ಹಾಡುಗಳನ್ನೂ ಸೇರಿದಂತೆ ವಿವಿಧ ಬಗೆಯ ಹಾಡುಗಳ ಮೂಲಕ ನೆರೆದಿದ್ದವರು ಕುಣಿದು ಕುಪ್ಪಳಿಸುವಂತೆ ಮಾಡಿದ್ದು, ಯುವಕ-ಯುವತಿಯರು ಸೇರಿದಂತೆ ಪ್ರೇಕ್ಷಕರು ಸೋನು ನಿಗಮ್ ಅವರ ಹಾಡಿಗೆ ತಲೆದೂಗುವ ಮೂಲಕ ಕಾರ್ಯಕ್ರಮ ಆಸ್ವಾದಿಸಿದರು.