ಸಾರಾಂಶ
ಶಿರಹಟ್ಟಿ: ವಚನಗಳು ನೈಜ ಜ್ಞಾನ ಸಂಪತ್ತು ಹೊಂದಿವೆ. ಅವುಗಳ ಸತತ ಅಧ್ಯಯನದಿಂದ ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಜ್ಯೋತಿ ಬೆಳಗುತ್ತದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಪಟ್ಟಣದ ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಚನಗಳನ್ನು ಓದಿ ಅವುಗಳಿಂದ ಪ್ರೇರಿತರಾಗಿ ಉತ್ತಮ ಮಾರ್ಗ ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಶರಣರ ಚಿಂತನೆ ಮತ್ತು ವಚನಗಳನ್ನು ಅಳವಡಿಸಿಕೊಂಡರೆ ಸಮಾಜ ಸುಧಾರಣೆ ಮಾಡಬಹುದು. ವಚನ ಮತ್ತು ಶರಣ ಸಾಹಿತ್ಯದಲ್ಲಿ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮುಂತಾದ ಮಾನವೀಯ ಮೌಲ್ಯಗಳು ಅಡಕವಾಗಿವೆ. ಇವುಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದರು.ಸುದೀರ್ಘ ಇತಿಹಾಸ ಹೊಂದಿರುವ ಸುತ್ತೂರು ಕ್ಷೇತ್ರ ಇಂದು ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಜತೆಗೆ ದೇಶದ ಉದ್ದಗಲಕ್ಕೂ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಬೆಳವಣಿಗೆಯ ಪ್ರೇರಕ ಶಕ್ತಿ ಸುತ್ತೂರಿನ ಹಿಂದಿನ ಶ್ರೀಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಎಂದು ಹೇಳಿದರು.
೧೯೮೬ರಲ್ಲಿ ಶರಣ ಸಾಹಿತ್ಯ ಪರಿಷತ್ ಹುಟ್ಟುಹಾಕಿದ ಶ್ರೀಗಳ ಜನ್ಮದಿನಾಚರಣೆಯನ್ನು ವಚನ ದಿನವನ್ನಾಗಿ ಆಚರಿಸಲಾಗುತ್ತಿದೆ. ಪರಿಷತ್ತು ಹೆಮ್ಮರವಾಗಿ ನಮ್ಮ ನಾಡಿನ ಉದ್ದಗಲಕ್ಕೂ ಹಲವಾರು ಶಾಖೆಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಕರ್ನಾಟಕದ ಆಚೆ ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ ಮುಂತಾದ ಪ್ರದೇಶಗಳಲ್ಲಿ ಶರಣರ ತತ್ವ-ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಲಕ್ಕುಂಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯದ ಸಾರ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ವಚನಗಳನ್ನು ಅಧ್ಯಯನ ಮಾಡಿ ಅದರ ಸಾರ ಅರ್ಥಮಾಡಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡು, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.ಎಚ್.ಎಂ. ದೇವಗಿರಿ, ಆರ್.ಬಿ. ಕಮತ್, ಬಸವರಾಜ ಬೋರಶೆಟ್ಟರ್, ಫಕೀರೇಶ ರಟ್ಟಿಹಳ್ಳಿ, ಎಸ್.ಆರ್. ಖವಾಸ್, ಪ್ರಿಯಾಂಕ ಉಮರ್ಜಿ, ಜಿ.ಡಿ. ಈರಕ್ಕನವರ ಭಾಗವಹಿಸಿದ್ದರು. ಸಂಗೀತ ಶಿಕ್ಷಕ ಷಣ್ಮುಖಪ್ಪ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕ ಆರ್.ಎಂ. ಪೊಲೀಸ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.