ಸಾರಾಂಶ
ಮಡಿಕೇರಿಯ ಜನತೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ವಾರದ ಒಳಗೆ ಬಗೆಹರಿಸಲು ನಗರಸಭೆಯ ಆಡಳಿತಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಗಂಭೀರ ಸ್ವರೂಪದ ಹೋರಾಟ ರೂಪಿಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಜನತೆ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ವಾರದ ಒಳಗೆ ಬಗೆಹರಿಸಲು ನಗರಸಭೆಯ ಆಡಳಿತಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಗಂಭೀರ ಸ್ವರೂಪದ ಹೋರಾಟ ರೂಪಿಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆಯ ಎಸ್‌ಡಿಪಿಐ ಸದಸ್ಯರಾದ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಆಲಿ, ಪೌರಾಯುಕ್ತರ ನಿರ್ಲಕ್ಷ್ಯ ಮತ್ತು ಈ ಹಿಂದಿನ ಅಧ್ಯಕ್ಷರ ಅಸಮರ್ಥ ಆಡಳಿತದಿಂದಾಗಿ ನಗರಸಭೆ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ ಎಂದು ಟೀಕಿಸಿದರು.
ಮಡಿಕೇರಿ ನಗರಸಭೆಯ ಮೊದಲನೇ ಅವಧಿ ಪೂರ್ಣಗೊಳಿಸಿ ಮುಂದಿನ ಅವಧಿಗೆ ಅಧಿಕಾರ ಹಿಡಿಯಲು ಆಡಳಿತ ಪಕ್ಷ ಬಿಜೆಪಿ ರಾಜಕೀಯ ಕಸರತ್ತು ನಡೆಸುತ್ತಿದೆ. ನಗರ ಎಂದೂ ಕಂಡರಿಯದ ಹೀನಾಯ ಆಡಳಿತಕ್ಕೆ ಹಿಂದಿನ ಆಡಳಿತ ಮಂಡಳಿ ಸಾಕ್ಷಿಯಾಗಿತ್ತು. ಬಿಜೆಪಿಯ ಸ್ವಾರ್ಥ, ದ್ವೇಷ ಹಾಗೂ ಬಣ ರಾಜಕೀಯದಿಂದಾಗಿ ನಗರಸಭೆ ಅಭಿವೃದ್ಧಿ ಶೂನ್ಯವಾಗಿದೆ. ವಿಶೇಷ ಅನುದಾನವನ್ನು ನಗರಸಭೆಗೆ ತರಲು ಹಾಗೂ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿಲ್ಲವೆಂದು ಟೀಕಿಸಿದರು.ಮಡಿಕೇರಿ ನಾಗರಿಕರು ಸಮಸ್ಯೆಗಳ ಪರಿಹಾರ ಮತ್ತು ಕಡತಗಳ ವಿಲೇವಾರಿಗಾಗಿ ನಗರಸಭೆಗೆ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆಯುಕ್ತರ ಸಾರ್ವಜನಿಕ ಸೇವೆಯ ಇಚ್ಛಾಶಕ್ತಿ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.
ನಗರದಲ್ಲಿ ನಿವೇಶನ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಕ್ಷಣ ಜಾಗ ಗುರುತಿಸಿ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.ನಗರಸಭೆಯ ಎಸ್‌ಡಿಪಿಐ ಸದಸ್ಯರಾದ ಬಷೀರ್ ಅಹಮ್ಮದ್, ನೀಮಾ ಹರ್ಷದ್ ಹಾಗೂ ಮೇರಿ ವೇಗಸ್ ಸುದ್ದಿಗೋಷ್ಠಿಯಲ್ಲಿದ್ದರು.