ಸಾರಾಂಶ
ಎಚ್.ವಿ.ರವಿಕುಮಾರ್
ಹೊಳೆನರಸೀಪುರ: ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪ ದಿಗ್ಗಜರೊಬ್ಬರ ಒಣ ಪ್ರತಿಷ್ಠೆಯಿಂದಾಗಿ ಕಟ್ಟಡ ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ಅನೈತಿಕ ಚಟುವಟಿಕೆ ಹಾಗೂ ಆತ್ಮಹತ್ಯೆಯ ತಾಣವಾಗಿ ಮಾರ್ಪಟ್ಟಿದೆ.ಪಟ್ಟಣದ ಡಾ.ಬಾಬು ಜಗಜೀವನ್‌ರಾಮ್ ವೃತ್ತ ಹಾಗೂ ಎಪಿಎಂಸಿ ಮಾರುಕಟ್ಟೆ ಸಮೀಪವಿರುವ ಒಕ್ಕಲಿಗರ ಕಲ್ಯಾಣ ಮಂಟಪ ನಿಮಾರ್ಣಕ್ಕೆ ೧೯೮೫ ಚುನಾವಣೆಯಲ್ಲಿ ವಿಜೇತರಾಗಿ ಮೊದಲ ಸಲ ಸಚಿವರಾಗಿದ್ದ ಎಚ್.ಡಿ.ದೇವೇಗೌಡರು ೧೯೬೨ರಲ್ಲಿ ಪ್ರಥಮವಾಗಿ ಶಾಸಕರಾಗಿ ಆಯ್ಕೆಯಾಗಿ ೨೬ ವರ್ಷಗಳ ನಂತರ ಸಿಕ್ಕ ಸಚಿವ ಸ್ಥಾನದಿಂದ ೧೯೮೮ ಅ.೨೩ ರಂದು ಬಾಲಗಂಗಾಧರನಾಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಒಕ್ಕಲಿಗರ ಸಂಘ ಟ್ರಸ್ಟ್ ವತಿಯಿಂದ ಒಕ್ಕಲಿಗರ ವಿದ್ಯಾರ್ಥಿ ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪಕ್ಕೆ ಶಂಕುಸ್ಥಾಪನೆ ಮಾಡಿ ಕಾಮಗಾರಿ ನಡೆಯಿತು.
೧೯೭೩ರಲ್ಲಿ ಒಕ್ಕಲಿಗರ ಸಂಘ ಸ್ಥಾಪನೆಯಾಯಿತು. ಅಂದಿನ ಕಾಂಗ್ರೆಸ್ ಪಕ್ಷದ ದಿಗ್ಗಜರೊಬ್ಬರು ಸರ್ವ ಒಕ್ಕಲಿಗ ಜನಾಂಗದ ಜನರಿಗೆ ಸೇರಿದ ನಿವೇಶನದಲ್ಲಿ ಒಕ್ಕಲಿಗರ ಸಂಘ ಟ್ರಸ್ಟ್ ರಚನೆ ಮಾಡಿ, ಟ್ರಸ್ಟ್ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಸರಿಯಲ್ಲ ಎಂದು ಅಪಸ್ವರ ಎತ್ತಿದರು. ನಂತರದ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿತು.೧೯೮೯ರ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಪರಾಜಿತರಾದರು. ೨೦೦೬ ಆ.೧೮ರಲ್ಲಿ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರು ನಿಧನರಾದರು, ನಂತರದ ದಿನಗಳಲ್ಲಿ ೨೦೨೩ ಚುನಾವಣೆಯಲ್ಲೂ ಶಾಸಕ ಎಚ್.ಡಿ.ರೇವಣ್ಣ ಜಯಗಳಿಸಿ, ನಿರಂತರ ಶಾಸಕರಾಗಿದ್ದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕನಸಿನ ಕೂಸು ಒಕ್ಕಲಿಗರ ವಿದ್ಯಾರ್ಥಿ ಹಾಸ್ಟೆಲ್ ಮತ್ತು ಕಲ್ಯಾಣ ಮಂಟಪ ಶಂಕುಸ್ಥಾಪನೆಗೊಂಡು ೩೫ ವರ್ಷಗಳು ಗತಿಸಿದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ದೈವಭಕ್ತರಾದ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಒಕ್ಕಲಿಗರ ಕಟ್ಟಡದಲ್ಲಿ ನಡೆದ ಆತ್ಮಹತ್ಯೆಗಳು ಮತ್ತು ಕುಹಕದ ಮಾತುಗಳು ಇದಕ್ಕೆ ಕಾರಣ ಎನ್ನಲಾಗಿದೆ.
ವಿಧಾನಸಭೆಯ ೧೯೫೨ರ ಪ್ರಥಮ ಚುನಾವಣೆಯ ನಂತರ ನಿರಂತರ ೭೨ ವರ್ಷಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ವಿಧಾನಸಭೆಗೆ ಒಕ್ಕಲಿಗ ಜನಾಂಗ ಹೊರತಾಗಿ ಮೂರು ಅವಧಿಗೆ ಮಾತ್ರ ಬ್ರಾಹ್ಮಣ ಜನಾಂಗದ ರಾಮಚಂದ್ರರಾಯರು, ವೀರಶೈವ ಜನಾಂಗದ ವೈ.ವೀರಪ್ಪ ಮತ್ತು ಕುರುಬ ಜನಾಂಗದ ಎ.ದೊಡ್ಡೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಕ್ಕಲಿಗರು ಶಾಸಕರಾಗಿ ಆಯ್ಕೆಯಾಗುವ ಜತೆಗೆ ಪ್ರಮುಖ ಖಾತೆಗಳ ಸಚಿವರು, ಮುಖ್ಯಮಂತ್ರಿ ಹಾಗೂ ಪ್ರಧಾನಿ ಪೀಠವನ್ನು ಅಲಂಕರಿಸಿ, ಕ್ಷೇತ್ರವನ್ನು ಖ್ಯಾತಿಗೊಳಿಸಿದ್ದಾರೆ. ಕರ್ನಾಟಕ ರಾಜ್ಯದ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಹಾಸನ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಧಾನಿಯಾದ ನಂತರ ಒಕ್ಕಲಿಗರ ವರ್ಚಸ್ಸು ಹೆಚ್ಚಿದೆ. ಪಟ್ಟಣದಲ್ಲಿ ಬಹುಸಂಖ್ಯಾತರಾದ ವೀರಶೈವರು, ಕುರುಬರು ಮತ್ತು ಇತರೆ ಜನಾಂಗಗಳ ಕಲ್ಯಾಣ ಮಂಟಪಗಳು ಇವೆ. ಆದರೆ ಒಕ್ಕಲಿಗರ ಕಲ್ಯಾಣ ಮಂಟಪವೇ ಇಲ್ಲ!.ಸೆ.೫ ರಂದು ಪಟ್ಟಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ದಿಗ್ಗಜ ನಾಯಕರೊಬ್ಬರ ಮಗ ಹಾಗೂ ಮತ್ತೊಬ್ಬರ ಮೊಮ್ಮಗ ಒಂದೇ ವೇದಿಕೆಯಲ್ಲಿ ಉಭಯ ಕುಶಲೋಪರಿ ವಿನಿಮಯವೂ ಸಭೆಯಲ್ಲಿ ಮಿಂಚಿನ ಸಂಚಾರ ಮೂಡಿಸಿತ್ತು. ಹೊಸ ಆಯಾಮ ಸೃಷ್ಟಿಸಿತ್ತು. ಇದೇ ಮನಸ್ಥಿತಿಯಲ್ಲಿ ಇನ್ನಾದರೂ ಒಕ್ಕಲಿಗರ ಕಲ್ಯಾಣ ಮಂಟಪ ಉದ್ಘಾಟನೆಯ ಭಾಗ್ಯ ಕಾಣುತ್ತದೆಯೇ ಎಂಬ ಯಕ್ಷಪ್ರಶ್ನೆ ಒಕ್ಕಲಿಗರನ್ನು ಕಾಡುತ್ತಿದೆ.