ಶಿವಮೊಗ್ಗದಲ್ಲೊಂದು ಸುಸಜ್ಜಿತ ಸ್ಕೇಟಿಂಗ್ ಕ್ರೀಡಾಂಗಣ: ಸಂಸದ ಬಿ.ವೈ.ಆರ್‌ ರಾಘವೇಂದ್ರ ಭರವಸೆ

| Published : Jul 07 2024, 01:21 AM IST

ಶಿವಮೊಗ್ಗದಲ್ಲೊಂದು ಸುಸಜ್ಜಿತ ಸ್ಕೇಟಿಂಗ್ ಕ್ರೀಡಾಂಗಣ: ಸಂಸದ ಬಿ.ವೈ.ಆರ್‌ ರಾಘವೇಂದ್ರ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಹೊರವಲಯದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗದ ನಮ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರೋಡ್ ರೇಸ್ ಸ್ಕೇಟಿಂಗ್ ಪಂದ್ಯಾವಳಿಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ವ್ಯವಸ್ಥಿತವಾದ ಸ್ಕೇಟಿಂಗ್ ಕ್ರೀಡಾಂಗಣ ಇಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯನ್ನು ನಡೆಸಲು ಕನಿಷ್ಠ 200 ಮೀಟರ್ ವಿಸ್ತೀರ್ಣದ ಅತ್ಯಂತ ವ್ಯವಸ್ಥಿತ ಸ್ಕೇಟಿಂಗ್ ಕ್ರೀಡಾಂಗಣ ಅವಶ್ಯಕತೆ ಇದ್ದು, ಇದರ ನಿರ್ಮಾಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ. ವೈ. ರಾಘವೇಂದ್ರ ಭರವಸೆ ನೀಡಿದರು.

ಶಿವಮೊಗ್ಗ ಹೊರವಲಯದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗದ ನಮ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರೋಡ್ ರೇಸ್ ಸ್ಕೇಟಿಂಗ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡುತ್ತಿದ್ದರು.

ನಾಲ್ಕನೇ ಬಾರಿ ಶಿವಮೊಗ್ಗ ಜಿಲ್ಲೆಯ ಜನತೆ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶವಾಗಿದೆ. ನಾನು ನಾಲ್ಕನೇ ಬಾರಿ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದ ರಸ್ತೆ, ರೈಲು, ವಿಮಾನ, ಶಿಕ್ಷಣ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಈಗ ಕ್ರೀಡಾ ಸಚಿವರನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ಅತ್ಯಂತ ವ್ಯವಸ್ಥಿತವಾದ ಕ್ರೀಡಾಂಗಣವನ್ನು ಮಾಡಿಸಿ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಸದ್ಯದಲ್ಲಿಯೇ ನಡೆಯಲಿರುವ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಜಾಗದ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಚರ್ಚಿಸಲಿದ್ದಾರೆ. ನಾನು ಕೇಂದ್ರ ಸರ್ಕಾರದಿಂದ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಅನುದಾನವನ್ನು ತರುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಭೂ ಸಾರಿಗೆ ರೈಲ್ವೆ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಶಿವಮೊಗ್ಗಕ್ಕೆ ಅಗತ್ಯವಿರುವಂತಹ ಎಲ್ಲಾ ಸೌಕರ್ಯಗಳನ್ನು ಪಡೆಯಲು ಮಾತನಾಡಿದ್ದೇನೆ ಎಂದರು.

ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಸಂಸದರು ತಮ್ಮ ಕೋರಿಕೆಯನ್ನು ಖಂಡಿತ ಈಡೇರಿಸುತ್ತಾರೆ. ಏನು ಇಲ್ಲದ ಶಿವಮೊಗ್ಗ ಇಂದು ಇಡೀ ದೇಶದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಮೊದಲು ಕೇವಲ ನಾಲ್ಕು ರೈಲುಗಳು ಶಿವಮೊಗ್ಗಕ್ಕೆ ಬರುತ್ತಿದ್ದವು. ಈಗ ಅವುಗಳ ಸಂಖ್ಯೆ 38 ಕ್ಕೆ ಏರಿದೆ. ವಿಮಾನ ನಿಲ್ದಾಣ ಆಗಿದೆ. ಶಿವಮೊಗ್ಗಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಂದೂಧರ್ ಸೀತಾರಾಮ ಅವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಈಗಾಗಲೇ ಕ್ರೀಡಾಪಟುಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ರಾಜ್ಯಮಟ್ಟದ ಅತ್ಯಂತ ವ್ಯವಸ್ಥಿತವಾದ ಪಂದ್ಯಾವಳಿ ಇದಾಗಿದೆ. ಶಿವಮೊಗ್ಗದಲ್ಲಿ ವ್ಯವಸ್ಥಿತವಾದ ಕ್ರೀಡಾಂಗಣ ಒಂದನ್ನು ನಿರ್ಮಿಸಲು ಸಂಸದರು ನೆರವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ನಮ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ರವಿ ಹಾಗೂ ಕರ್ನಾಟಕ ರಾಜ್ಯ ರೋಲರ್ ಕೇಟಿಂಗ್ ಅಸೋಸಿಯೇಷನ್ ಪ್ರಮುಖರು ಮತ್ತು ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಪಡೆದ ಅಂಪೈರ್ ಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಸ್ಕೇಟಿಂಗ್ ಪಟುಗಳನ್ನು ಸನ್ಮಾನಿಸಲಾಯಿತು. ವಕೀಲ ಪ್ರವೀಣ್ ಸ್ವಾಗತಿಸಿದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.