ಕನ್ನಡಪ್ರಭ ವಾರ್ತೆ ಬೆಂಗಳೂರು:

ಪತಿಗಿಂತ ಹೆಚ್ಚು ದುಡಿಯುವ ಹಾಗೂ ಯಾವುದೇ ಹೊಣೆಗಾರಿಕೆ ಇಲ್ಲದ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ‌ ಎಂದು‌ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ

ಪ್ರಕರಣವೊಂದರಲ್ಲಿ ಪತ್ನಿಗೆ ಮಾಸಿಕ ₹20 ಸಾವಿರ ಜೀವನಾಂಶ ನೀಡಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ‌ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರ ಪೀಠ, ಪತ್ನಿಯರನ್ನು ಸದಾ ಗಂಡಂದಿರೇ ನಿರ್ವಹಣೆ ಮಾಡಬೇಕು ಎಂಬ ಲಿಂಗ ಆಧಾರಿತ ಕಲ್ಪನೆಗಳ ಪ್ರಭಾವಕ್ಕೆ ಕೌಟುಂಬಿಕ ನ್ಯಾಯಾಲಯಗಳು ಒಳಗಾಗಬಾರದು ಎಂದು ಆದೇಶಿಸಿದೆ.

ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದಾಗ, ಗಂಡನಿಗಿಂತ ಪತ್ನಿಯ ಆದಾಯವೇ ಹೆಚ್ಚಿದ್ದಾಗ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಇತರ ಹೊಣೆಗಾರಿಕೆಗಳು ಆಕೆಗೆ ಇಲ್ಲದಿದ್ದಾಗ, ಹೆಂಡತಿಯನ್ನು ಗಂಡನೇ ನಿರ್ವಹಣೆ ಮಾಡಬೇಕು ಎಂಬ ಆಧಾರದ ಮೇಲೆ ಜೀವನಾಂಶ ನೀಡಬೇಕು ಎಂಬುದಾಗಿ ಆದೇಶ ಹೊರಡಿಸಬಾರದು ಎಂದು ಆದೇಶಿಸಿದೆ.

ಅಲ್ಲದೆ, ಪತ್ನಿಯರಿಗೆ ತನ್ನ ಗಂಡನಿಂದ ಜೀವನಾಂಶ ಪಡೆಯುವುದನ್ನು ಬಿಟ್ಟು, ತನ್ನನ್ನು ತಾನು ನಿರ್ವಹಿಸಲು ಯಾವುದೇ ಆರ್ಥಿಕ ಮೂಲಗಳು ಇಲ್ಲ ಎಂದು ತೋರಿಸಿದಾಗ ಮಾತ್ರ ನ್ಯಾಯಾಲಯಗಳು ಮಧ್ಯಂತರ ಅಥವಾ ಅಂತಿಮ ಜೀವನಾಂಶ ನೀಡುವ ಅಗತ್ಯವಿದೆ ಎಂದು ಹೇಳಿದೆ.


ಪ್ರಕರಣದ ವಿವರ:

2024ರಲ್ಲಿ ವಿವಾಹವಾಗಿದ್ದ ದಂಪತಿ, ಭಿನ್ನಾಭಿಪ್ರಾಯಗಳಿಂದ ಕೆಲವೇ ತಿಂಗಳಲ್ಲೇ ಪ್ರತ್ಯೇಕವಾಗಿ ನೆಲೆಸಿದ್ದರು. ಆದರೆ, ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಗೆ ₹60,646 ಸಂಬಳವಿದ್ದರೆ ಪತ್ನಿಗೆ ₹1 ಲಕ್ಷ ಮಾಸಿಕ ಸಂಬಳವಿತ್ತು. ವಿಚಾರಣಾ ನ್ಯಾಯಾಲಯ ಪತ್ನಿಗೆ ₹20 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದಲ್ಲಿ ಪತ್ನಿಯ ಆದಾಯವು ಪತಿಯ ಆದಾಯಕ್ಕಿಂತ ಹೆಚ್ಚಿದೆ. ಪತ್ನಿಯೇ ಒಪ್ಪಿಕೊಂಡಂತೆ ಆಕೆಯ ಆದಾಯ ₹1 ಲಕ್ಷ ಆಗಿದೆ. ಆದ್ದರಿಂದ ಆಕೆ ತನ್ನನ್ನು ತಾನು ನಿರ್ವಹಿಸಿಕೊಳ್ಳಬಹುದು. ಹಾಗಾಗಿ, ತನ್ನ ಮಾಸಿಕ ಗಳಿಕೆ ₹60 ಸಾವಿರಗಳಿಂದ ತಿಂಗಳಿಗೆ ₹20 ಸಾವಿರ ಜೀವನಾಂಶವನ್ನು ಪತ್ನಿಗೆ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ಪತಿಗೆ ಆದೇಶಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಆದೇಶ ಮಾಡಿದೆ.