ಕನ್ನಡಪ್ರಭ ವಾರ್ತೆ ಮಡಿಕೇರಿ
ಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೋಕ್ಲು ಎಂಬಲ್ಲಿ ಭಾನುವಾರ ಬೆಳಗ್ಗೆ ಬೊಗಳಿದ ನಾಯಿಯನ್ನು ಅಟ್ಟಿಸಿಕೊಂಡು ಬಂದ ಕಾಡಾನೆಯೊಂದು ಮನೆಯ ಕಾಂಪೌಂಡ್ ಒಳಗೆ ನುಗ್ಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಗೋಣಿಕೊಪ್ಪಲು ಪೊನ್ನಂಪೇಟೆ ರಸ್ತೆಯ ಅರುವತೋಕ್ಲು ಗ್ರಾಮದ ಕಾಫಿ ಬೋರ್ಡ್ ಸಮೀಪವಿರುವ ಕಬ್ಬಚೀರ ಬಿದ್ದು ಉತ್ತಪ್ಪ ಎಂಬವರ ಮನೆಯ ನಾಯಿಗಳು ಆನೆಯನ್ನು ಕಂಡು ಬೊಗಳಿದೆ. ಕಾಡಾನೆ ಅಟ್ಟಿಸಿಕೊಂಡು ಬಂದಾಗ ನಾಯಿಗಳು ಕಾಂಪೌಂಡ್ ಹಾರಿ ಒಳಗೆ ಬಂದರೆ, ಕಾಡಾನೆ ಗೇಟ್ ತೆರದು ನೇರವಾಗಿ ಮನೆಯಂಗಳಕ್ಕೆ ಬಂದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಡಾನೆ ನಾಯಿಗಳನ್ನು ಅಟ್ಟಾಡಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಡಾನೆ ಅಂಗಳವನ್ನು ಪ್ರವೇಶಿಸಿ ನಂತರ ವಾಪಸ್ ತೆರಳಿದೆ. ಮನೆಯ ಅಂಗಳದಲ್ಲಿದ್ದ ಹೂ ಕುಂಡಗಳು ಸೇರಿದಂತೆ ಯಾವುದೇ ವಸ್ತುವಿಗೆ ಹಾನಿ ಮಾಡಿಲ್ಲ.ಈ ಭಾಗದಲ್ಲಿ ಪ್ರತಿ ವರ್ಷ ಕಾಡಾನೆಯೊಂದು ಮಧ್ಯರಾತ್ರಿ ಕಾಣಿಸಿಕೊಳ್ಳುತ್ತಿತ್ತು. ಕಾಫಿ ಬೋರ್ಡ್ ಸಮೀಪ ಇರುವ ತರಕಾರಿ ಅಂಗಡಿಗೆ ತೆರಳಿ ಹಣ್ಣು ಹಂಪಲುಗಳನ್ನು ತಿಂದು ಹೋಗುತ್ತಿತ್ತು. ಆದರೆ ಈ ಬಾರಿ ಹೊಸ ಕಾಡಾನೆ ಈ ಭಾಗದಲ್ಲಿರುವ ಕಾಫಿ ತೋಟದೊಳಗೆ ಬೀಡುಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.
ವಾಲ್ನೂರು ಗ್ರಾಮದಲ್ಲೂ ಕಾಡಾನೆ ದಾಳಿ:
ಮನೆಯಂಗಳಕ್ಕೆ ಒಂಟಿ ಸಲಗ ನುಗ್ಗಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ಕಾಡಾನೆ ಕಂಡು ಮನೆಯವರು ಭಯಭೀತಗೊಂಡಿದ್ದಾರೆ. ಕಾಡಾನೆ ಕಾಣುತ್ತಿದ್ದಂತೆ ಕೂಗಾಡಿ ಮನೆಯೊಳಗೆ ಓಡಿದ್ದಾರೆ.
