ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೆಣ್ಣು ಮಕ್ಕಳು ಮತ್ತೊಬ್ಬ ಹೆಣ್ಣನ್ನು ಕೀಳಾಗಿ ಟೀಕಿಸಿ ಅಪಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವ ಜೊತೆಗೆ ಹೆಣ್ಣು ಮಕ್ಕಳ ಪ್ರಾಮಾಣಿಕ ಜನಪರ ಕೆಲಸ ಕಾರ್ಯಗಳಿಗೆ ಅರ್ಥ ಬರುತ್ತದೆ ಎಂದು ರೈತ ನಾಯಕಿ ನಂದಿನಿ ಜಯರಾಂ ಹೇಳಿದರು.ಪಟ್ಟಣದ ಅತ್ತಿಗುಪ್ಪೆ ಸಾಹಿತ್ಯ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕವಿಯಿತ್ರಿ ರಮ್ಯಾ ರಮೇಶ್ ಅವರ ಚೊಚ್ಚಲ ಕವನ ಸಂಕಲನ ನನ್ನ ಪಯಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ತಲೆಮಾರು ಮೊಬೈಲ್ ಸಂಸ್ಕೃತಿಗೆ ದಾಸರಾಗುತ್ತಿದ್ದು, ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಪುಸ್ತಕಗಳನ್ನು ಓದುವ ಅಭ್ಯಾಸದಿಂದ ಬೆಳೆಯುವ ಸೃಜನಶೀಲತೆ ಮೊಬೈಲ್ ಸಂಸ್ಕೃತಿಯಿಂದ ಬರುವುದಿಲ್ಲ ಎಂದರು.ಮೊಬೈಲ್ ನಮ್ಮ ಬೌದ್ಧಿಕ ಚಿಂತನಗೆಳನ್ನು ನಾಶಪಡಿಸುತ್ತಿದೆ. ಹೊಸ ತಲೆಮಾರಿನ ಕವಿಗಳು ಓದುಗರನ್ನು ಮುಟ್ಟುತ್ತಿಲ್ಲ. ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು. ಇದರಲ್ಲಿ ಗೃಹಣಿಯರ ಪಾತ್ರ ಅತಿ ದೊಡ್ಡದು ಎಂದರು.
ಇಂದಿನ ನಾಗರಿಕ ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಿದ್ದಾಳೆ. ಹೆಣ್ಣು ಮಕ್ಕಳು ಮೊದಲು ಆತ್ಮಸ್ಥೈರ್ಯ ಬೆಳೆಸಿಕೊಂಡು ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಗುರಿ ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಜೀವನಾನುಭವಗಳೇ ಕವಿತೆಗಳಾಗಿ ಹೊರ ಹೊಮ್ಮಬೇಕು. ರಮ್ಯಾ ರಮೇಶ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ತಮ್ಮ ಜೀವನಾನುಭವಗಳನ್ನು ಒಳಗೊಂಡಿರುವ ‘ನನ್ನ ಪಯಣ’ ಕವನ ಸಂಕಲನ ಬಿಡುಗಡೆ ಮಾಡುತ್ತಿದ್ದಾರೆ. ರಮ್ಯಾರ ಸಾಹಿತ್ಯ ಕೃಷಿ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
‘ನನ್ನ ಪಯಣ’ ಕವನ ಸಂಕಲನದ ಕರ್ತೃ ರಮ್ಯಾ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಾನಕಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮೇಲ್ವಿಚಾರಕ ರಘು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಣ್ಣ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ಲೇಖಕಿ ಎಂ.ವೇದಾವತಿ, ವಿಶ್ರಾಂತ ಮುಖ್ಯ ಶಿಕ್ಷಕಿ ಜಾನಕಿ ಇದ್ದರು.ಜೆ.ಎಸ್.ನಿತನ್ ಗೆ ಚಿನ್ನದ ಪದಕಕೆ.ಆರ್.ಪೇಟೆ: ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಲ್ಲಿ ಜಲಕೃಷಿ ಮತ್ತು ಮೀನುಗಾರಿಕೆ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ ತಾಲೂಕಿನ ಜೈನಹಳ್ಳಿಯ ಶಿವಶಂಕರ್ ಮತ್ತು ಕಲ್ಪನ ದಂಪತಿ ಪುತ್ರ ಜೆ.ಎಸ್.ನಿತಿನ್ ಜಲಕೃಷಿ ಮತ್ತು ಮೀನುಗಾರಿಕೆ ವಿಜ್ಞಾನ ವಿಷಯದಲ್ಲಿ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.ಕಳೆದ ಫೆ.27ರಂದು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಅವರು ಜೆ.ಎಸ್.ನಿತಿನ್ ಅವರಿಗೆ ಪದವಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದರು. ರಾಜ್ಯ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೇರಿದಂತೆ ಹಲವು ಗಣ್ಯರಿದ್ದರು.