ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಹೆಣ್ಣು ಮಕ್ಕಳು ಪ್ರಸ್ತುತ ಯಾವುದೇ ಕೆಲಸದಲ್ಲೂ ಹಿಂದೆ ಬೀಳುತ್ತಿಲ್ಲ, ಮನೆ ಕೆಲಸದಿಂದ ಹಿಡಿದು ಬಾಹ್ಯಕಾಶದವರೆಗೆ ಕೆಲಸ ಮಾಡಿ ಯಶಸ್ವಿಯಾಗಿದ್ದಾಳೆ ಎಂದು ಅಬಕಾರಿ ನಿರೀಕ್ಷಕಿ ಎನ್.ದೀಪು ಹೇಳಿದರು.

ಪಟ್ಟಣದ ಜ್ಞಾನ ಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದಕ್ಕೆಲ್ಲ ಪ್ರಯತ್ನದ ಫಲವೇ ಕಾರಣ ಎಂದರು.

ಹೆಣ್ಣು ಮಕ್ಕಳು ಯಾರ ಬಳಿಯೂ, ಯಾವುದಕ್ಕೂ ಕೈಚಾಚಬೇಕಾಗಿಲ್ಲ. ನಮ್ಮ ಹಕ್ಕನ್ನು ನಾವು ಪ್ರಶ್ನೆ ಮಾಡಿ ಪಡೆದುಕೊಳ್ಳುವ ಹೋರಾಟದಲ್ಲೂ ಯಶಸ್ವಿಯಾಗಬೇಕಾಗಿದೆ ಎಂದರು.

ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸ್ವಾವಲಂಬಿಯಾಗಲು ಮುಂದಾಗಬೇಕು ಎಂದು ಮಹಿಳೆಯರಲ್ಲಿ ಕೋರಿದರಲ್ಲದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.


ಕಾರ್ಯಕ್ರಮ ಉದ್ಘಾಟಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಎಂ. ಮಾತನಾಡಿ, ಹೆಣ್ಣು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಪೋಷಕರು ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಗೆ ಬಿದ್ದು ಮೋಸ ಹೋದ ಘಟನೆಗಳೂ ಪೋಷಕರಿಗೆ ಭಯವನ್ನುಂಟು ಮಾಡುತ್ತಿವೆ ಎಂದರು.

ಆದರೆ ನಮ್ಮ ಮಕ್ಕಳ ಮೇಲೆ ನಾವು ನಂಬಿಕೆ ಇಟ್ಟು ಅವರ ಮುಂದಿನ ಭವಿಷ್ಯದ ನಿರ್ಮಾಣಕ್ಕಾಗಿ ಶಿಕ್ಷಣ ನೀಡಬೇಕು. ಹೆಣ್ಣು ಇಂದಿನ ಸಂದರ್ಭದಲ್ಲಿ ಮನೆಗೆ ಮಾತ್ರ ಸೀಮಿತವಾಗದೆ ಸಮಾಜ ಕಟ್ಟುವ ಹಂತದಲ್ಲಿ ಭಾಗಿದಾರಳಾಗುತ್ತಿದ್ದಾಳೆ ಎಂದರು.

ಮಕ್ಕಳಿಗೆ ಬಾಲ್ಯ ವಿವಾಹ ದುಷ್ಪರಿಣಾಮ ಹಾಗೂ ಇತ್ತೀಚಿಗೆ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚುತ್ತಿದ್ದು ಪೋಕ್ಸೋ ಕಾಯ್ದೆ ಕುರಿತು ಪೋಷಕರು ಹಾಗೂ ಯುವಕರು ಅರಿತು ಕಾನೂನನ್ನು ಪಾಲಿಸಿದ್ದಲ್ಲಿ ಸುಸ್ಥಿರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಆರ್ ಎಲ್ಎಚ್ ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ಹೋರಾಟಗಾರ್ತಿ ಮಮತಾ ಯಜಮಾನ್ ಮಹಿಳಾ ಸಬಲೀಕರಣ ಕುರಿತು ಮಾತನಾಡಿ, ಮಹಿಳಾ ಪರ ಜಾನಪದ ಗೀತೆಗಳ ಮೂಲಕ ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬಿದರು.

ಮಹಿಳೆಯರು ತಮ್ಮ ಆತ್ಮವಿಶ್ವಾಸ, ಗೌರವ, ನಂಬಿಕೆಗಳಿಗೆ ಅಡೆ ತಡೆಯಾಗುವ ಯಾವುದೇ ಸಮಯದಲ್ಲೂ ಎದುರಿಸಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದರು.

ಗಮನ ಸೆಳೆದ ನೃತ್ಯ:

ಕಾರ್ಯಕ್ರಮದಲ್ಲಿ ಮಹಿಳೆಯರು, ಯುವತಿಯರು ನಾನಾ ಬಗೆಯ ನೃತ್ಯಗಳನ್ನು ಮಾಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಿದರು ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರು ಬಹುಮಾನವನ್ನು ಪಡೆದುಕೊಂಡರು.